ಹೆರಿಗೆ ಯೋಜನೆ ಫಲಾನುಭವಿಗಳಿಗೆ ಆಧಾರ್ ದಾಖಲೆಗೆ ಒತ್ತಾಯಿಸಬೇಡಿ: ದಿಲ್ಲಿ ಸರಕಾರಕ್ಕೆ ಸೂಚನೆ

Update: 2018-07-31 18:00 GMT

ಹೊಸದಿಲ್ಲಿ, ಜು.31: ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಹೆರಿಗೆ ಯೋಜನೆಯ ಸೌಲಭ್ಯಗಳನ್ನು ಒದಗಿಸುವ ಸಂದರ್ಭ ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದಂತಹ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಕಾನೂನಿನ ಆಧಾರವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಆಪ್ ಸರಕಾರಕ್ಕೆ ತಿಳಿಸಿದೆ. ಈ ರೀತಿಯ ದಾಖಲೆಗಳಿಗೆ ಒತ್ತಾಯಿಸದೆ, ಜನನಿ ಸುರಕ್ಷಾ ಯೋಜನೆ(ಜೆಎಸ್‌ವೈ)ಗಳಂತಹ ಹೆರಿಗೆ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವಂತೆ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರಿದ್ದ ನ್ಯಾಯಪೀಠವು ದಿಲ್ಲಿ ಸರಕಾರಕ್ಕೆ ಸೂಚಿಸಿದೆ. 

ಅಲ್ಲದೆ ಈ ಯೋಜನೆಗಳಲ್ಲಿ ದೊರಕುವ ಸವಲತ್ತುಗಳ ಹಾಗೂ ಯೋಜನೆಗೆ ನೋಂದಣಿಗೊಳಿಸುವ ಪ್ರಕ್ರಿಯೆಯ ಕುರಿತು ವ್ಯಾಪಕ ಪ್ರಚಾರಕಾರ್ಯ ನಡೆಸುವಂತೆ ಸರಕಾರಕ್ಕೆ ನಿರ್ದೇಶಿಸಿತು. ಜೆಎಸ್‌ವೈ ಯೋಜನೆಗೆ ಆಧಾರ್ ಕಡ್ಡಾಯ ಎಂದು ಎಲ್ಲಿ ಕೂಡಾ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿತು. ಜೆಎಸ್‌ವೈ ಯೋಜನೆಯಡಿ ಸೌಲಭ್ಯ ನೀಡಬೇಕಿದ್ದರೆ ಆಧಾರ್ ಕಾರ್ಡ್ ಅಗತ್ಯ ಎಂಬ ದಿಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿದೆ.

ಅಲ್ಲದೆ ಜೆಎಸ್‌ವೈ ಯೋಜನೆಯ ಬಗ್ಗೆ ಮಾಹಿತಿಯಿಲ್ಲದ , ಹಾಗೂ ಈ ಯೋಜನೆಗೆ ನೋಂದಣಿಗೊಳ್ಳದ 22 ಬಡ ಮಹಿಳೆಯರ ಪಟ್ಟಿಯನ್ನೂ ಅರ್ಜಿಯ ಜತೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇವರಲ್ಲಿ ಹೆಚ್ಚಿನವರು ಬ್ಯಾಂಕ್ ಖಾತೆ ಅಥವಾ ಆಧಾರ್ ಕಾರ್ಡನ್ನು ಹೊಂದಿಲ್ಲ ಎಂಬುದನ್ನು ಉಲ್ಲೇಖಿಸಿದ ನ್ಯಾಯಪೀಠವು, ಇಂತಹ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದು ವಿಶ್ಲೇಷಿಸಿತು. ಈ ಹಿಂದೆ ದೇಶದ 53 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಇಂದಿರಾಗಾಂಧಿ ಮಾತೃತ್ವ ಸಹಯೋಗ್ ಯೋಜನೆ(ಐಜಿಎಂಎಸ್‌ವೈ)ಯ ಹೆಸರನ್ನು ಪ್ರಧಾನ್‌ಮಂತ್ರಿ ಮಾತೃತ್ವ ವಂದನ ಯೋಜನೆ(ಪಿಎಂಎಂವಿವೈ) ಎಂದು ಬದಲಿಸಿದ ಬಳಿಕ, ಈ ಹಿಂದೆ ಅರ್ಹರಾಗಿದ್ದ ಮಹಿಳೆಯರನ್ನು ಸೌಲಭ್ಯ ವಂಚಿತಗೊಳಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News