ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ: ಆರೋಪಿಗಳ ವಿಚಾರಣೆಗೆ ಅನುಮತಿ ಪಡೆಯಲು ಸಿಬಿಐಗೆ 2 ತಿಂಗಳು ಕಾಲಾವಕಾಶ
ಹೊಸದಿಲ್ಲಿ, ಜು. 30: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ನಿರ್ದಿಷ್ಟ ಆರೋಪಿಯ ವಿಚಾರಣೆ ನಡೆಸಲು ಸಂಬಂಧಿತ ಅಧಿಕಾರಿಯಿಂದ ಅನುಮತಿ ಪಡೆಯಲು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಸಿಬಿಐಗೆ ಎರಡು ತಿಂಗಳು ಸಮಯಾವಕಾಶ ನೀಡಿದೆ.
ಸಿಬಿಐ ಕಾಂಗ್ರೆಸ್ ನಾಯಕ ಚಿದಂಬರ, ಅವರ ಪುತ್ರ ಕಾರ್ತಿ ಹಾಗೂ ಸರಕಾರಿ ಅಧಿಕಾರಿ, ಆರು ಕಂಪೆನಿಗಳು ಸೇರಿದಂತೆ 10 ಜನರ ವಿರುದ್ಧ ಜುಲೈ 19ರಂದು ಪ್ರಕರಣ ದಾಖಲಿಸಿತ್ತು. ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ನ್ಯಾಯವಾದಿ ಸೋನಿಯಾ ಮಾಥುರ್ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ವಿಶೇಷ ಸಿಬಿಐ ನ್ಯಾಯಮೂರ್ತಿ ಒ.ಪಿ. ಸೈನಿ, ಸಮಯಾವಕಾಶ ನೀಡಬೇಕೆಂಬ ಸಿಬಿಐಯ ಮನವಿಗೆ ಅನುಮತಿ ನೀಡಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 1ಕ್ಕೆ ಮುಂದೂಡಿದೆ.
ಸಿಬಿಐ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಮಾಥುರ್, ಆರೋಪಿಗಳ ವಿಚಾರಣೆಗೆ ಸಂಬಂಧಿತ ಅಧಿಕಾರಿಗಳಿಂದ ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದು, ಅವರ ಅನುಮತಿಗಾಗಿ ಎದುರು ನೋಡುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.