×
Ad

ನೀರಿನ ಹರಿವು ಹೆಚ್ಚಿದ್ದರಿಂದ ಯಮುನಾ ನದಿ ಅತ್ಯಂತ ‘ಆರೋಗ್ಯಯುತವಾಗಿದೆ:ತಜ್ಞರು

Update: 2018-07-31 23:41 IST

  ಹೊಸದಿಲ್ಲಿ,ಜು.31: ನೆರೆನೀರಿನ ಒಳಹರಿವಿನಲ್ಲಿ ಏರಿಕೆಯಿಂದಾಗಿ ಯಮುನಾ ನದಿಯ ನೀರಿನ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿರುವುದರಿಂದ ಅದು ಕಳೆದೆರಡು ದಿನಗಳಿಂದ ಈ ವರ್ಷದಲ್ಲಿ ಮೊದಲ ಬಾರಿಗೆ ತನ್ನ ಅತ್ಯಂತ ‘ಆರೋಗ್ಯಯುತ’ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.

ನದಿಯಲ್ಲಿನ ಮಾಲಿನ್ಯಕಾರಕಗಳನ್ನು ನಿವಾರಿಸುವ ಆಮ್ಲಜನಕದ ಪ್ರಮಾಣ ನೆರೆನೀರಿನಲ್ಲಿ ಹೆಚ್ಚಾಗಿದ್ದು ಈ ಸುಧಾರಣೆಗೆ ಮುಖ್ಯ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಸೋಮವಾರ ಹಾಥಿನಿ ಕುಂಡ ಒಡ್ಡಿನಿಂದ 5,13,354 ಕ್ಯುಸೆಕ್ಸ್ ನೀರನ್ನು ಬಿಡುಗಡೆಗೊಳಿಸಿದ್ದರಿಂದ ಯಮುನಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿದಿದ್ದು,ತಗ್ಗು ಪ್ರದೇಶಗಳಲ್ಲಿನ ಸುಮಾರು 10,000 ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು.

ದೇಶದ ಅತ್ಯಂತ ಮುಖ್ಯ ನದಿಗಳಲ್ಲೊಂದಾಗಿರುವ ಯಮುನಾ ಉತ್ತರಾಖಂಡ, ಹರ್ಯಾಣ,ದಿಲ್ಲಿ ಮತ್ತು ಉತ್ತರ ಪ್ರದೇಶಗಳ ಮೂಲಕ ಹರಿದು ಅಲಹಾಬಾದ್‌ನಲ್ಲಿ ಗಂಗಾನದಿಯನ್ನು ಸೇರುತ್ತದೆ. ದೇಶದ ಅತ್ಯಂತ ಮಲಿನ ನದಿಗಳಲ್ಲೊಂದು ಎಂಬ ಅಪಖ್ಯಾತಿಗೂ ಯಮುನಾ ಗುರಿಯಾಗಿದೆ.

ಯಮುನಾ ಜಿಯೆ ಅಭಿಯಾನದ ಸಂಚಾಲಕ ಮನೋಜ ಮಿಶ್ರಾ ಅವರು,ನದಿನೀರಿನಲ್ಲಿಯ ಸುಧಾರಣೆಯನ್ನು ಮಳೆಗಾಲದಲ್ಲಿ ಉಂಟಾಗುವ ತಾತ್ಕಾಲಿಕ ಪರಿಣಾಮ ಎಂದು ಬಣ್ಣಿಸಿದ್ದಾರೆ.

ನೆರೆನೀರಿನ ಉತ್ತಮ ಒಳಹರಿವಿನಿಂದಾಗಿ ಯಮುನಾ ನದಿ ಈಗ ಅತ್ಯಂತ ಆರೋಗ್ಯಯುತ ಸ್ಥಿತಿಯಲ್ಲಿದೆ. ಅದರ ಆರೋಗ್ಯವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News