ಆಂಗ್ಲರಿಗೆ ರೂಟ್-ಬೈರ್‌ಸ್ಟೋವ್ ಆಸರೆ: ಅಶ್ವಿನ್ ಶೈನ್

Update: 2018-08-01 18:11 GMT

ಬರ್ಮಿಂಗ್‌ಹ್ಯಾಮ್, ಆ.1: ಪ್ರವಾಸಿ ಭಾರತ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನಾಯಕ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಅವರ ಅರ್ಧಶತಕಗಳ ನೆರವಿನಲ್ಲಿ ಆತಿಥೇಯ ಇಂಗ್ಲೆಂಡ್ ಉತ್ತಮ ಮೊತ್ತ ದಾಖಲಿಸಿದೆ.

ಟೆಸ್ಟ್‌ನ ಮೊದಲ ದಿನವಾಗಿರುವ ಬುಧವಾರ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 88 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 285 ರನ್ ಗಳಿಸಿದೆ. 24 ರನ್ ಗಳಿಸಿರುವ ಸ್ಯಾಮ್ ಕುರ್ರನ್ ಮತ್ತು ಇನ್ನೂ ಖಾತೆ ತೆರೆಯದ ಜೇಮ್ಸ್ ಆ್ಯಂಡರ್ಸನ್ ಔಟಾಗದೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಜೋ ರೂಟ್ 80ರನ್(156ಎ, 9ಬೌ) ಮತ್ತು ಜಾನಿ ಬೈರ್‌ಸ್ಟೋವ್ 70 ರನ್(88ಎ, 9ಬೌಂಡರಿ) ಗಳಿಸಿ ಇಂಗ್ಲೆಂಡ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇವರು 4ನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ನೀಡಿದರು.

ಭಾರತದ ಸ್ಪಿನ್ನರ್ ಆರ್.ಅಶ್ವಿನ್ 60ಕ್ಕೆ 4 ವಿಕೆಟ್, ಮುಹಮ್ಮದ್ ಶಮಿ 64ಕ್ಕೆ 2, ಉಮೇಶ್ ಯಾದವ್ ಮತುತಿ ಇಶಾಂತ್ ಶರ್ಮಾ ತಲಾ 1 ವಿಕೆಟ್ ಹಂಚಿಕೊಂಡರು.

6,000 ರನ್ ಪೂರ್ಣಗೊಳಿಸಿದ ರೂಟ್
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ರೂಟ್ ಅವರು 5 ವರ್ಷ ಮತ್ತು 231 ದಿನಗಳಲ್ಲಿ 6 ಸಾವಿರ ರನ್ ಪೂರ್ಣಗೊಳಿಸುವ ಮೂಲಕ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟೈರ್ ಕುಕ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕುಕ್ 5 ವರ್ಷ ಮತ್ತು 339 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್‌ನ ಪಾಲಿಗೆ 1,000ನೇ ಟೆಸ್ಟ್ ಎನಿಸಿಕೊಂಡಿರುವ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ನಾಯಕ ರೂಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಮುಹಮ್ಮದ್ ಶಮಿ ಅವರು ಇಂಗ್ಲೆಂಡ್‌ನ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಇಂಗ್ಲೆಂಡ್ 8.5 ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಕುಕ್ 13 ರನ್ ಗಳಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕೀಟನ್ ಜೆನ್ನಿಂಗ್ಸ್‌ಗೆ ರೂಟ್ ಜೊತೆಯಾದರು. ಜೆನ್ನಿಂಗ್ಸ್ 42 ರನ್ ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಡೇವಿಡ್ ಮಲಾನ್ 8 ರನ್ ಗಳಿಸಿ ಶಮಿ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.

27ರ ಹರೆಯದ ರೂಟ್ 127ನೇ ಟೆಸ್ಟ್ ಇನಿಂಗ್ಸ್ ನಲ್ಲಿ 40 ರನ್ ಗಳಿಸುವುದರೊಂದಿಗೆ 6 ಸಾವಿರ ರನ್ ಪೂರೈಸಿದರು. ಜೋ ರೂಟ್ ಶತಕ ಗಳಿಸುವ ಹಾದಿಯಲ್ಲಿದ್ದರು. ಆದರೆ 62.3ನೇ ಓವರ್‌ನಲ್ಲಿ ಎರಡು ರನ್ ಗಳಿಸುವ ಯತ್ನದಲ್ಲಿ ರನೌಟಾದರು. ನಾಯಕ ವಿರಾಟ್ ಕೊಹ್ಲಿ ಮಿಂಚಿನ ವೇಗದಲ್ಲಿ ರನೌಟ್ ಮಾಡಿದರು. ಬೈರ್ ಸ್ಟೋವ್ 70 ರನ್ ಗಳಿಸಿ ಉಮೇಶ್ ಯಾದವ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬೆನ್ ಸ್ಟೋಕ್ಸ್ 21 ರನ್, ಆದಿಲ್ ರಶೀದ್ 13 ರನ್, ಸ್ಟುವರ್ಟ್ ಬ್ರಾಡ್ 1ರನ್ ಗಳಿಸಿ ಔಟಾದರು.ಬಟ್ಲರ್ (0) ಖಾತೆ ತೆರೆಯದೆ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News