ಸೆರೆನಾಗೆ ಹೀನಾಯ ಸೋಲು

Update: 2018-08-01 18:20 GMT

ಲಾಸ್ ಏಂಜಲೀಸ್, ಆ.1: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವೃತ್ತಿಜೀವನದಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದ್ದಾರೆ. ಮಂಗಳವಾರ ಡಬ್ಲುಟಿಎ ಸಾನ್ ಜೋಸ್ ಟೆನಿಸ್ ಟೂರ್ನಿಯಲ್ಲಿ 23 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಸೆರೆನಾ ಕೇವಲ 51 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಸುತ್ತಿನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್‌ನ ನಂ.1 ಆಟಗಾರ್ತಿ,ಶ್ರೇಯಾಂಕರಹಿತ ಜೊಹನ್ನಾ ಕಾಂಟಾ ವಿರುದ್ಧ 1-6, 0-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. 36ರ ಹರೆಯದ ಸೆರೆನಾ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಹೀನಾಯ ಸೋಲು ಕಂಡಿದ್ದಾರೆ.

ವಿಂಬಲ್ಡನ್ ಫೈನಲ್‌ನಲ್ಲಿ ಸೋತ ಬಳಿಕ ಮೊದಲ ಪಂದ್ಯವನ್ನು ಆಡಿದ ಸೆರೆನಾ ಈಗ ಮೊದಲಿನ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೆರೆನಾ ವಿಂಬಲ್ಡನ್ ಫೈನಲ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ಗೆ ಶರಣಾಗಿ ಎರಡನೇ ಸ್ಥಾನ ಪಡೆದಿದ್ದರು. ಕಾಂಟಾ ಎರಡನೇ ಸುತ್ತಿನಲ್ಲಿ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಸೋತಿದ್ದರು. ತನ್ನ ಬಳಿ ಪದೇ ಪದೇ ಸ್ಯಾಂಪಲ್‌ಗಳನ್ನು ಕೇಳುವ ಮೂಲಕ ಕ್ರೀಡಾ ಡ್ರಗ್ ಟೆಸ್ಟ್ ಪ್ರೋಗಾಂನಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಒಂದು ತಿಂಗಳಲ್ಲಿ ಸೆರೆನಾ ಅವರು ಕಾಂಟಾಗೆ ಸೋತಿದ್ದಾರೆ. ಸೆರೆನಾ 2011, 2012 ಹಾಗೂ 2014ರಲ್ಲಿ ಸಾನ್ ಜೋಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. 2017ರ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಕಾಂಟಾ ವಿರುದ್ಧ 6-2, 6-3 ಅಂತರದಿಂದ ಜಯ ಸಾಧಿಸಿದ್ದರು. 2016ರಲ್ಲಿ ಸಾನ್ ಜೋಸ್ ಟೂರ್ನಿಯನ್ನು ಜಯಿಸಿದ್ದ ಕಾಂಟಾ ಮುಂದಿನ ಸುತ್ತಿನಲ್ಲಿ ಸೋಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News