ಮೊದಲ ಟ್ವೆಂಟಿ-20: ವೆಸ್ಟ್ಇಂಡೀಸ್ ಗೆಲುವಿನಾರಂಭ

Update: 2018-08-01 18:25 GMT

ಸೈಂಟ್‌ಕಿಟ್ಸ್, ಆ.1: ಕೆಸ್ರಿಕ್ ವಿಲಿಯಮ್ಸ್ ಜೀವನಶ್ರೇಷ್ಠ ಬೌಲಿಂಗ್(28ಕ್ಕೆ4) ಹಾಗೂ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಸಾಹಸ(ಔಟಾಗದೆ 35,21 ಎಸೆತ)ನೆರವಿನಿಂದ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡ ಬಾಂಗ್ಲಾದೇಶ ವಿರುದ್ಧದ ಮಳೆಬಾಧಿತ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿನ ವಾರ್ನರ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಆತಿಥೇಯ ವಿಂಡೀಸ್ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

  ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಿತು. ಬಾಂಗ್ಲಾ ಬ್ಯಾಟಿಂಗ್ ಬೆನ್ನಿಗೆ ಪಂದ್ಯಕ್ಕೆ 90 ನಿಮಿಷಕ್ಕೂ ಅಧಿಕ ಸಮಯ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಡಕ್‌ವರ್ತ್ -ಲೂಯಿಸ್ ನಿಯಮದ ಪ್ರಕಾರ ವಿಂಡೀಸ್ ಗೆಲುವಿಗೆ 11 ಓವರ್‌ಗಳಲ್ಲಿ 91 ರನ್ ಪರಿಷ್ಕೃತ ಗುರಿ ನೀಡಲಾಯಿತು.

 21 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿಗಳಿದ್ದ 35 ರನ್ ಕಲೆ ಹಾಕಿದ ರಸೆಲ್ ವಿಂಡೀಸ್‌ಗೆ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

ಆರಂಭಿಕ ದಾಂಡಿಗರಾದ ಎವಿನ್ ಲೂಯಿಸ್(2) ಹಾಗೂ ಆ್ಯಂಡ್ರೆ ಫ್ಲೆಚರ್(7) ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಬಾಂಗ್ಲಾದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್‌ಗೆ ವಿಕೆಟ್ ಒಪ್ಪಿಸಿದರು. ಆಗ 10 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಸಂಕಷ್ಟಕ್ಕೆ ಸಿಲುಕಿತ್ತು. 3ನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದ ರಸೆಲ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(25) ತಂಡವನ್ನು ಆಧರಿಸಿದರು. ರೊವ್‌ಮನ್ ಪೊವೆಲ್(ಔಟಾಗದೆ 15)ಅವರೊಂದಿಗೆ ಕೈಜೋಡಿಸಿದ ರಸೆಲ್ 3 ವಿಕೆಟ್‌ಗೆ 93 ರನ್ ಗಳಿಸಿ ತಂಡಕ್ಕೆ 7 ವಿಕೆಟ್ ಜಯ ತಂದರು.

  ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ಅತ್ಯಂತ ಕಳಪೆ ಆರಂಭ ಪಡೆದಿತ್ತು. ಏಕದಿನ ಸರಣಿಯಲ್ಲಿ 2 ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು. ಇನಿಂಗ್ಸ್‌ನ ಮೊದಲ ಓವರ್ ಎಸೆದಿದ್ದ ಆ್ಯಂಡ್ರೆ ನರ್ಸ್ (6ಕ್ಕೆ2) ಬಾಂಗ್ಲಾದ ಇಬ್ಬರೂ ದಾಂಡಿಗರನ್ನು ಬೇಗನೇ ಔಟ್ ಮಾಡಿ ಫೀಲ್ಡಿಂಗ್ ಆಯ್ದುಕೊಂಡ ನಾಯಕ ಕಾರ್ಲೊಸ್ ಬ್ರಾತ್‌ವೇಟ್ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಲಿಟನ್ ದಾಸ್(24) ಹಾಗೂ ನಾಯಕ ಶಾಕಿಬ್ ಅಲ್ ಹಸನ್(19) ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ದಾಸ್-ಹಸನ್ ವಿಕೆಟ್ ಕಬಳಿಸಿದ ಕೀಮೊ ಪೌಲ್(24ಕ್ಕೆ2) ವಿಂಡೀಸ್‌ಗೆ ಮೇಲುಗೈ ಒದಗಿಸಿದರು. ಬಾಂಗ್ಲಾದ ಪರ ಮಹ್ಮೂದುಲ್ಲಾ(35) ಸರ್ವಾಧಿಕ ಸ್ಕೋರ್ ಗಳಿಸಿದರು.

ಮುಶ್ಫಿಕುರ್ರಹೀಂ(15)ಆರಿಫುಲ್ ಹಕ್(15)ಮೆಹಿದಿ ಹಸನ್(11) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News