×
Ad

ಕತರ್ ಮೇಲಿನ ಸೌದಿ, ಯುಎಇ ದಾಳಿಯನ್ನು ಟಿಲರ್‌ಸನ್ ತಡೆದರೇ?

Update: 2018-08-02 19:32 IST

►ತನಿಖಾ ಸುದ್ದಿ ವೆಬ್‌ಸೈಟ್ ‘ದಿ ಇಂಟರ್‌ಸೆಪ್ಟ್’ ವರದಿ

ವಾಶಿಂಗ್ಟನ್, ಜು. 2: ಕಳೆದ ವರ್ಷದ ಜೂನ್‌ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಆರಂಭಗೊಂಡ ಹಂತದಲ್ಲಿ ಕತರ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಂದಾಗಿದ್ದವು. ಆದರೆ, ಆಗ ಮಧ್ಯಪ್ರವೇಶಿಸಿದ ಅಂದಿನ ಅಮೆರಿಕ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅದನ್ನು ತಡೆದಿದ್ದರು.

ಇದುವೇ ಟಿಲರ್‌ಸನ್‌ರ ನಿರ್ಗಮನಕ್ಕೆ ಕಾರಣವಾಗಿರಬಹುದು ಎಂದು ತನಿಖಾ ಸುದ್ದಿ ವೆಬ್‌ಸೈಟ್ ‘ದಿ ಇಂಟರ್‌ಸೆಪ್ಟ್’ ವರದಿ ಮಾಡಿದೆ.

ಸೌದಿ ಭೂಸೇನೆಯು ಗಡಿ ದಾಟಿ ಕತರ್ ಪ್ರವೇಶಿಸುವುದು ಹಾಗೂ ಯುಎಇ ಸೇನೆಯ ಸಹಕಾರದಿಂದ 100 ಕಿ.ಮೀ. ಮುಂದುವರಿದು ಕತರ್ ರಾಜಧಾನಿಯನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿತ್ತು ಎಂದು ವೆಬ್‌ಸೈಟ್ ಹೇಳಿದೆ.

ಅಮೆರಿಕ ಗುಪ್ತಚರ ಸಮುದಾಯದ ಹಾಲಿ ಸದಸ್ಯ ಮತ್ತು ವಿದೇಶ ಇಲಾಖೆಯ ಇಬ್ಬರು ಮಾಜಿ ಅಧಿಕಾರಿಗಳಿಂದ ತಾನು ಈ ಮಾಹಿತಿಯನ್ನು ಪಡೆದಿರುವುದಾಗಿ ವೆಬ್‌ಸೈಟ್ ತಿಳಿಸಿದೆ.

ಸೌದಿ ಅರೇಬಿಯ ಮತ್ತು ಯುಎಇಯ ಇಬ್ಬರು ಯುವರಾಜರು ರೂಪಿಸಿದ ಈ ಯೋಜನೆಯನ್ನು ಕೆಲವು ವಾರಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿತ್ತು ಎಂದಿದೆ.

ಸೌದಿ ಪಡೆಗಳು ಅಮೆರಿಕ ವಾಯುಪಡೆಯ ಕೇಂದ್ರೀಯ ಕಮಾಂಡ್ ಇರುವ ಅಲ್ ಉದೀದ್ ವಾಯು ನೆಲೆಯನ್ನು ತಪ್ಪಿಸಿ ದೋಹಾವನ್ನು ವಶಪಡಿಸಿಕೊಳ್ಳುವುದು ಯೋಜನೆಯಾಗಿತ್ತು. ಅಮೆರಿಕ ವಾಯುಪಡೆಯ ಕೇಂದ್ರೀಯ ಕಮಾಂಡ್‌ನಲ್ಲಿ ಸುಮಾರು 10,000 ಅಮೆರಿಕ ಸೈನಿಕರಿದ್ದಾರೆ.

ಒಳಗೆ ಬಾಕ್ಸ್

ಮಧ್ಯಪ್ರವೇಶಿಸಿದ ಟಿಲರ್‌ಸನ್

ಈ ಸಂಭಾವ್ಯ ದಾಳಿ ಕುರಿತ ಮಾಹಿತಿಯನ್ನು ಕತರ್ ಗುಪ್ತಚರ ಅಧಿಕಾರಿಗಳು ಟಿಲರ್‌ಸನ್‌ರ ಗಮನಕ್ಕೆ ತಂದಾಗ, ಅವರು ದಾಳಿ ನಡೆಸದಂತೆ ಸೌದಿ ಅರೇಬಿಯ ದೊರೆ ಸಲ್ಮಾನ್‌ರನ್ನು ಒತ್ತಾಯಿಸಿದರು ಎಂದು ವೆಬ್‌ಸೈಟ್ ಹೇಳಿದೆ.

ಅದೂ ಅಲ್ಲದೆ, ಇಂಥ ದಾಳಿಯ ಅಪಾಯಗಳ ಬಗ್ಗೆ ಸೌದಿ ಅರೇಬಿಯದ ರಕ್ಷಣಾ ಸಚಿವರಿಗೆ ವಿವರಿಸುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್‌ಗೆ ಸೂಚಿಸಿದರು ಎನ್ನಲಾಗಿದೆ.

ಟಿಲರ್‌ಸನ್‌ರ ಒತ್ತಡದ ಹಿನ್ನೆಲೆಯಲ್ಲಿ, ಕತರ್ ಮೇಲೆ ದಾಳಿ ನಡೆಸುವ ಯೋಜನೆಯಿಂದ ಸಲ್ಮಾನ್ ಹಿಂದೆ ಸರಿದರು ಎಂದು ‘ದಿ ಇಂಟರ್‌ಸೆಪ್ಟ್’ ಹೇಳಿದೆ.

ಒಳಗೆ ಬ್ಕಾಸ್

ಟಿಲರ್‌ಸನ್ ನಿರ್ಗಮನಕ್ಕೆ ಲಾಬಿ

ಈ ವಿಷಯದಲ್ಲಿ ಟಿಲರ್‌ಸನ್‌ರ ಮಧ್ಯಪ್ರವೇಶದಿಂದ ಅಬುಧಾಬಿಯ ಯುವರಾಜ ಹಾಗೂ ಯುಎಇಯ ವಾಸ್ತವಿಕ ಆಡಳಿತಗಾರ ಮುಹಮ್ಮದ್ ಬಿನ್ ಝಾಯಿದ್ ಆಕ್ರೋಶಗೊಂಡರು ಎನ್ನಲಾಗಿದೆ.

ಅವರು ಬಳಿಕ ಟಿಲರ್‌ಸನ್‌ರನ್ನು ವಜಾಗೊಳಿಸುವಂತೆ ಶ್ವೇತಭವನದಲ್ಲಿ ಲಾಬಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News