ಅರಬ್ ಕವಯಿತ್ರಿಗೆ 5 ತಿಂಗಳು ಕಾರಾಗೃಹ ಶಿಕ್ಷೆ

Update: 2018-08-02 17:38 GMT

ಜೆರುಸಲೇಂ, ಆ. 2: ಇಸ್ರೇಲಿ-ಪೆಲೆಸ್ತಿನಿಯನ್ ಹಿಂಸಾಚಾರದ ಸಂದರ್ಭ ಸಾಮಾಜಿಕ ಜಾಲ ತಾಣದ ಪೋಸ್ಟ್‌ಗಳ ಮೂಲಕ ಹಿಂಸಾಚಾರಕ್ಕೆ ಉತ್ತೇಜಿಸಿದ ಅಪರಾಧಕ್ಕೆ ಸಂಬಂಧಿಸಿ ಅರಬ್ ಕವಯಿತ್ರಿ ದರೀನ್ ತತೌರ್‌ಗೆ ಇಸ್ರೇಲಿ ನ್ಯಾಯಾಲಯ 5 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದರೀನ್ ತತೌರ್ ಅವರು ಈಗಾಗಲೇ 3 ವರ್ಷಗಳನ್ನು ಗೃಹ ಬಂಧನದಲ್ಲಿ ಕಳೆದಿದ್ದಾರೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನಝರತ್ ಜಿಲ್ಲಾ ನ್ಯಾಯಾಲಯ ಇಸ್ರೇಲಿ ಪ್ರಜೆಯಾಗಿರುವ 36ರ ಹರೆಯದ ತತೌರ್ ಅವರಿಗೆ 5 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ‘ಪ್ರತಿರೋಧಿಸಿ, ನನ್ನ ಜನರು ಅವರನ್ನು ವಿರೋಧಿಸುತ್ತಾರೆ’ ಎಂಬ ಕವನ ಓದುತ್ತಿರುವುದನ್ನು ಫೇಸ್‌ಬುಕ್ ಹಾಗೂ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಕೆಲವು ದಿನಗಳ ಬಳಿಕ, 2015 ಅಕ್ಟೋಬರ್‌ನಲ್ಲಿ ಇಸ್ರೇಲಿ ಪೊಲೀಸರು ದಾಳಿ ನಡೆಸಿ ತತೌರ್ ಅವರನ್ನು ಬಂಧಿಸಿದ್ದರು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ತತೌರ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಲೈಸ್ ವಾಲ್ಕರ್ ಹಾಗೂ ನವೋಮಿ ಕ್ಲೈನ್ ಸಹಿತ 150ಕ್ಕೂ ಅಧಿಕ ಸಾಹಿತಿಗಳು ಮನವಿ ಮಾಡಿದ್ದರು. ತತೌರ್ ಬಂಧನ ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆ ಎಂದು ಅವರು ಪ್ರತಿಪಾದಿಸಿದ್ದರು. ತೀರ್ಪು ನೀಡಿದ ಇಸ್ರೇಲ್ ನ್ಯಾಯಾಲಯ, ತತೌರ್ ಅವರ ಕವನ ಹಿಂಸಾಚಾರಕ್ಕೆ ಉತ್ತೇಜನ ನೀಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರದ ಮಿತಿಯನ್ನು ಮೀರಿದೆ ಎಂದಿದೆ. ತತೌರ್ ಅವರು ಭಯೋತ್ಪಾದಕರಿಗೆ ಬೆಂಬಲ ನೀಡಿದ ಅಪರಾಧಿ ಎಂದು ಕೂಡ ಪರಿಗಣಿಸಲಾಗಿದೆ. ಆದರೆ, ತನ್ನ ಕವನ ಎಲ್ಲೂ ಹಿಂಸಾಚಾರಕ್ಕೆ ಕರೆ ನೀಡಿಲ್ಲ ಎಂದು ತತೌರ್ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News