ಪ್ರಧಾನಿ ರ‍್ಯಾಲಿಯಲ್ಲಿ ಟೆಂಟ್ ಕುಸಿದ ಘಟನೆಗೆ ಸ್ಥಳೀಯ ಅಧಿಕಾರಿಗಳೇ ಹೊಣೆ: ತನಿಖಾ ವರದಿ

Update: 2018-08-02 14:34 GMT

 ಹೊಸದಿಲ್ಲಿ, ಆ.2: ಇತ್ತೀಚೆಗೆ ಪಶ್ಚಿಮ ಬಂಗಾಳದ ಮಿಡ್ನಾಪೋರ್‌ನಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯ ಸಂದರ್ಭ ಟೆಂಟ್ ಕುಸಿದ ಘಟನೆಯ ಬಗ್ಗೆ ತನಿಖೆ ನಡೆಸಿರುವ ಕೇಂದ್ರದ ತಂಡವು, ಈ ಘಟನೆಗೆ ಸ್ಥಳೀಯ ಅಧಿಕಾರಿಗಳ ಅಸಹಕಾರ ಕಾರಣ ಎಂದು ತಿಳಿಸಿದೆ.

  ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಉನ್ನತ ಭದ್ರತಾ ಸಂಪರ್ಕ ತಂಡಕ್ಕೆ ಸೂಕ್ತ ಸಹಕಾರ ನೀಡಿಲ್ಲ. ಅಲ್ಲದೆ ಪ್ರಧಾನಿಗಳ ಕಾರ್ಯಕ್ರಮ ನಡೆಯುವ ಪ್ರದೇಶದ ಐದು ಕಿ.ಮೀ.ವ್ಯಾಪ್ತಿಯೊಳಗೆ ಬೇಕಾದಷ್ಟು ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಪ್ರಧಾನಿಯವರ ಕಾರ್ಯಕ್ರಮ ನಡೆಯುವ ಸ್ಥಳದ ಒಳವಲಯದ ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ವಿಶೇಷ ಸುರಕ್ಷಾ ಪಡೆ(ಎಸ್‌ಪಿಜಿ) ವಹಿಸುತ್ತದೆ. ಆದರೆ ಹೊರವಲಯದ ಭದ್ರತೆಯ ಹೊಣೆ ರಾಜ್ಯ ಸರಕಾರದ್ದು. ಈ ಹೊಣೆ ನಿಭಾಯಿಸುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲವಾಗಿದ್ದಾರೆ. ಅಲ್ಲದೆ ಪ್ರಧಾನಿಯವರ ಕಾರ್ಯಕ್ರಮ ನಡೆಯುವ ಎರಡು ವಾರಗಳ ಹಿಂದೆ ಉನ್ನತ ಭದ್ರತಾ ಸಂಪರ್ಕ ತಂಡ ರಾಜ್ಯಕ್ಕೆ ಭೇಟಿ ನೀಡಿದಾಗ ವ್ಯವಸ್ಥಾಪನೆಗೆ ಸೂಕ್ತ ಸಹಾಯ ಮಾಡಲಾಗಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News