ನಿಜವಾದ ಪ್ರಜೆಗಳ ಹೆಸರುಗಳು ಎನ್‌ಆರ್‌ಸಿಯಲ್ಲಿ ಬಿಟ್ಟುಹೋಗದಂತಿರಲು ಆದ್ಯತೆ:ಆರ್‌ಜಿಐ
ಹೊಸದಿಲ್ಲಿ,ಆ.2: ಅಸ್ಸಾಮಿನ ಅಂತಿಮ ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ 40 ಲಕ್ಷ ಜನರ ಹೆಸರುಗಳನ್ನು ಕೈಬಿಟ್ಟಿರುವ ಬಗ್ಗೆ ಕಾವೇರಿದ ಚರ್ಚೆಗಳ ನಡುವೆಯೇ ಭಾರತೀಯ ಮಹಾ ನೋಂದಣಾಧಿಕಾರಿ ಹಾಗೂ ಜನಗಣತಿ ಆಯುಕ್ತ (ಆರ್‌ಜಿಐ) ಶೈಲೇಶ ಅವರು,ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ಭಾರತೀಯರ ಹೆಸರುಗಳು ಎನ್‌ಆರ್‌ಸಿಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳುವುದಾಗಿ ಗುರುವಾರ ಇಲ್ಲಿ ಭರವಸೆ ನೀಡಿದರು. ಪಟ್ಟಿಯಿಂದ ತಮ್ಮ ಹೆಸರುಗಳು ಬಿಟ್ಟುಹೋಗಿರುವವರ ಕಳವಳಗಳು ಅಧಿಕಾರಿಗಳಿಗೆ ಅರ್ಥವಾಗಿವೆ ಎಂದರು.
ಎನ್‌ಆರ್‌ಸಿಯಲ್ಲಿ ನೋಂದಣಿಗಾಗಿ ಸಲ್ಲಿಸಲಾಗಿದ್ದ ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಾಹಿತಿ ಮತ್ತು ಅರಿವಿನ ಕೊರತೆ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗಲು ಕಾರಣವಾಗಿರಬಹುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಅವರು, ಇದು ನಮಗೂ ಕಳವಳದ ವಿಷಯವಾಗಿದೆ ಮತ್ತು ಕೇವಲ ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ಭಾರತೀಯರ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳುತ್ತೇವೆ. ಕೆಲವು ಪ್ರಕರಣಗಳಲ್ಲಿ ಮಾಹಿತಿ ಮತ್ತು ಸಬಲೀಕರಣದ ಕೊರತೆಯಿಂದಾಗಿ ವ್ಯಕ್ತಿಯ ಬಳಿ ಕೆಲವು ದಾಖಲೆಗಳಿಲ್ಲದಿರಬಹುದು. ಆದರೆ ಆತ ನಿಜವಾದ ಭಾರತೀಯ ಪ್ರಜೆಯಾಗಿದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ ಎಂದರು.
ನಿಜವಾದ ಪ್ರಜೆಗೆ ಅಗತ್ಯ ದಾಖಲೆಗಳು ದೊರೆಯುವಂತೆ ನಾವು ನೋಡಿಕೊಳ್ಳಬೇಕಿದೆ ಎಂದರು.
ನಾವು ಈ ವಿಷಯದಲ್ಲಿ ಸಂವೇದನಾಶೀಲರಾಗಿದ್ದೇವೆ,ಕೆಲವರು ಸಲ್ಲಿಸಿದ್ದ ದಾಖಲೆಗಳಲ್ಲಿ ಸಣ್ಣ ತಪ್ಪಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇದ್ದೇ ಇದೆ ಎಂದ ಅವರು, ಆ.30ರಿಂದ ಆರಂಭಗೊಳ್ಳಲಿರುವ ಹಕ್ಕುಗಳು ಮತ್ತು ಆಕ್ಷೇಪಗಳ ಸಲ್ಲಿಕೆ ಸಂದರ್ಭದಲ್ಲಿ ದೂರುಗಳನ್ನು ಹೊಂದಿರುವವರಿಗೆ ಸೂಕ್ತ ಅವಕಾಶ ನೀಡುವುದು,ಅಗತ್ಯವುಳ್ಳವರಿಗೆ ಮತ್ತು ಅವಿದ್ಯಾವಂತರಿಗೆ ನೆರವು ಒದಗಿಸುವುದು ಮತ್ತು ಇಡೀ ಪ್ರಕ್ರಿಯೆಯ ಬಗ್ಗೆ ಸಾಮಾಜಿಕ,ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಗ್ರತಿ ಕಾರ್ಯಕ್ರಮವನ್ನು ಆರಂಭಿಸುವುದು ಎನ್‌ಆರ್‌ಸಿ ಅಧಿಕಾರಿಗಳ ಮುಖ್ಯ ಆದ್ಯತೆಗಳಾಗಿರಲಿವೆ ಎಂದರು.
ಆಧಾರ್ ಹೊಂದಿದವರೂ ಪಟ್ಟಿಯಿಂದ ಹೊರಗಿದ್ದಾರೆ ಎಂಬ ವರದಿಗಳ ಕುರಿತಂತೆ ಶೈಲೇಶ ಅವರು,ಆಧಾರ ಪೌರತ್ವದ ಪುರಾವೆಯಲ್ಲ,ಅದು ಕೇವಲ ವಸತಿ ದಾಖಲೆಯಾಗಿದೆ ಎಂದರು.
ಪೌರತ್ವ ಕಾಯ್ದೆ ಮತ್ತು ನಿಯಮಗಳಡಿ 12 ದಾಖಲೆಗಳನ್ನು ಪಟ್ಟಿ ಮಾಡಲಾಗಿದ್ದು, ಅರ್ಜಿದಾರನ ವಂಶ ಪರಂಪರೆ ದಾಖಲೆ ಅವುಗಳಲ್ಲೊಂದಾಗಿದೆ ಎಂದ ಅವರು, ಕುಟುಂಬವೊಂದರ ಕೆಲವು ಸದಸ್ಯರ ಹೆಸರುಗಳು ಪಟ್ಟಿಯಲ್ಲಿದ್ದು,ಇತರರ ಹೆಸರುಗಳು ತಪ್ಪಿರುವುದಕ್ಕೆ ವಿವಿಧ ಕಾರಣಗಳಿರಬಹುದು. ದಾಖಲೀಕರಣ ಪ್ರಕ್ರಿಯೆಯ ಬಗ್ಗೆ ಜನರಿಗೆ ಸರಿಯಾಗಿ ಗೊತ್ತಿಲ್ಲದಿರಬಹುದು ಮತ್ತು ವಂಶ ಪರಂಪರೆ ದಾಖಲೆಯಂತಹ ಅಗತ್ಯ ದಾಖಲೆಗಳೂ ಇವೆ ಎನ್ನುವುದು ಅವರಿಗೆ ತಿಳಿದಿಲ್ಲದಿರಬಹುದು. ಹಲವು ಸಂದರ್ಭಗಳಲ್ಲಿ ವಂಶ ಪರಂಪರೆ ದಾಖಲೆ ಅಗತ್ಯವಾಗಿದೆ. ಈ ದಾಖಲೆಯನ್ನು ಅಧಿಕಾರಿಗಳಿಗೆ ಸಲ್ಲಿಸದಿರುವ ಸಾಧ್ಯತೆಗಳಿವೆ ಎಂದರು.
ಇಂತಹ ದಾಖಲೆಗಳನ್ನು ತಾವು ಸಲ್ಲಿಸಿಲ್ಲ ಎನ್ನುವುದು ಜನರಿಗೆ ಗೊತ್ತಾದ ಬಳಿಕ ಹಕ್ಕುಗಳು ಮತ್ತು ಆಕ್ಷೇಪಗಳನ್ನು ಸಲ್ಲಿಸುವಾಗ ಅವರು ಅದನ್ನು ಖಂಡಿತ ತರುತ್ತಾರೆ ಎಂದರು.