ದಾಭೋಳ್ಕರ್, ಪನ್ಸಾರೆ ಹತ್ಯೆ ಪ್ರಕರಣ ತನಿಖೆ ವಿಳಂಬ: ಸಿಬಿಐ, ಮಹಾರಾಷ್ಟ್ರ ಸಿಐಡಿಗೆ ಹೈಕೋರ್ಟ್ ತರಾಟೆ

Update: 2018-08-02 17:05 GMT

ಮುಂಬೈ, ಆ.2: ವಿಚಾರವಾದಿಗಳಾದ ನರೇಂದ್ರ ಧಾಬೋಳ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಳಂಬ ಧೋರಣೆ ತೋರಲಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳ ತನಿಖಾ ಸಂಸ್ಥೆಗಳನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದೆ. ಕೇಂದ್ರ ತನಿಖಾ ತಂಡವಾದ ಸಿಬಿಐ ಮತ್ತು ಮಹಾರಾಷ್ಟ್ರದ ಸಿಐಡಿ ತಂಡ ನಡೆಸಿರುವ ತನಿಖೆಯ ಕುರಿತು ತನಗೆ ತೃಪ್ತಿಯಿಲ್ಲ ಎಂದು ತಿಳಿಸಿದ ನ್ಯಾಯಾಧೀಶರಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರಿದ್ದ ನ್ಯಾಯಪೀಠವು, ಈ ಎರಡೂ ತನಿಖಾ ಸಂಸ್ಥೆಗಳು ಸಲ್ಲಿಸಿರುವ ರಹಸ್ಯ ವರದಿಯ ಫೈಲನ್ನು ವಾಪಸು ನೀಡಿತಲ್ಲದೆ, ಈ ವರದಿಯಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ತಿಳಿಸಿತು.

ಜನರು ದೇಶದಲ್ಲಿ ಮುಕ್ತವಾಗಿ ಮಾತನಾಡಲು ಅಥವಾ ಸಂಚರಿಸಲು ಅಸಾಧ್ಯವಾಗಿರುವಂತಹ ಪರಿಸ್ಥಿತಿ ಇದೆ. ಆದರೂ ಈ ಮೇಲಿನ ಪ್ರಕರಣಗಳ ತನಿಖೆಯನ್ನು ತುರ್ತಾಗಿ ನಡೆಸಲು ತನಿಖಾ ಸಂಸ್ಥೆಗಳ ಅಧಿಕಾರಿಗಳು ಮುಂದಾಗುತ್ತಿಲ್ಲ ಹಾಗೂ ತನಿಖಾ ಕಾರ್ಯದಲ್ಲಿ ಯಾವುದೇ ವಾಸ್ತವಿಕ ಪ್ರಗತಿಯಾಗಿಲ್ಲ ಎಂದು ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಇಂತಹ ಸೂಕ್ಷ್ಮ ಪ್ರಕರಣಗಳ ನಿರ್ವಹಣೆಯಲ್ಲಿ ತನಿಖಾ ತಂಡಗಳ ಅಧಿಕಾರಿಗಳು ಸಂಪೂರ್ಣ ಅಸಂಗತರಾಗಿದ್ದು ಸೂಕ್ಷ್ಮಗ್ರಾಹಿಗಳಾಗಿಲ್ಲ. ದೇಶವು ಈಗ ದುರಂತಮಯ ಹಂತಕ್ಕೆ ಸಾಕ್ಷಿಯಾಗುತ್ತಿದೆ. ಯಾವುದೇ ಭೀತಿಯಿಲ್ಲದೆ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ ಎಂದು ಜನರು ಭಾವಿಸಿದ್ದಾರೆ.

ಪ್ರತಿಯೊಬ್ಬರೂ ಪ್ರಯಾಣದ ವೇಳೆ ಅಥವಾ ಮುಕ್ತವಾಗಿ ಮಾತಾಡಲು ಪೊಲೀಸ್ ರಕ್ಷಣೆ ಕೋರಬೇಕಾದ ಪರಿಸ್ಥಿತಿಯತ್ತ ನಾವು ಸಾಗುತ್ತಿದ್ದೇವೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಈಗ ರಾಜ್ಯದಲ್ಲಿ ನಡೆಯುತ್ತಿರುವುದೇನು. ಜನತೆ ಬಸ್ಸುಗಳತ್ತ ಕಲ್ಲೆಸೆಯುತ್ತಾ ಬಸ್ಸುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದನ್ನು ಯಾರು ಬೇಕಾದರೂ ಮಾಡಬಹುದು ಎಂದಾಗಿದೆ. ಸರಕಾರ ನಾಳೆ ಬದಲಾಗಬಹುದು. ಆದರೆ ರಾಜ್ಯವು ಮಿಲಿಯಾಂತರ ಜನರಿಗೆ ಆಶ್ರಯತಾಣವಾಗಿದೆ. ನಾಳೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಯಸುವ ಪ್ರತಿಯೊಬ್ಬರೂ ಪೊಲೀಸ್ ರಕ್ಷಣೆ ಪಡೆಯಬೇಕೇ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ. ಸಿಬಿಐ ಮತ್ತು ಸಿಐಡಿಯ ಹಿರಿಯ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ರಹಸ್ಯ ಅಂಶಗಳಿವೆ ಎಂದು ಹೇಳಲಾಗಿದೆ. ಆದರೆ ಇದರಲ್ಲಿ ಅಂತಹ ರಹಸ್ಯವೇನಿಲ್ಲ. ಈವರೆಗೆ ನಡೆಸಿರುವ ತನಿಖಾ ಕಾರ್ಯದ ಬಗ್ಗೆ ವಿವರವಿದೆ ಅಷ್ಟೇ . ಸಿಬಿಐ ಮತ್ತು ಸಿಐಡಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಕೋರ್ಟ್ ಸಮನ್ಸ್ ನೀಡಿದೆ. ಆದರೂ ಇನ್ನೂ ಇವರು ಪ್ರಾಥಮಿಕ ವರದಿಯನ್ನಷ್ಟೇ ಸಲ್ಲಿಸುವುದು ಆಶ್ಚರ್ಯಕರವಾಗಿದೆ ಎಂದು ನ್ಯಾಯಪೀಠ ಅಸಮಾಧಾನ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News