ಪುಸ್ತಕಗಳ ನಿಷೇಧದಿಂದ ಭಾವನೆಗಳ ಹರಿವಿಗೆ ಧಕ್ಕೆ: ಸುಪ್ರೀಂ ಅಭಿಮತ

Update: 2018-08-02 17:07 GMT

ಹೊಸದಿಲ್ಲಿ, ಆ.2: ಪುಸ್ತಕಗಳನ್ನು ನಿಷೇಧಿಸುವ ಸಂಸ್ಕೃತಿಯಿಂದ ಭಾವನೆಗಳ ಮುಕ್ತ ಹರಿವಿನ ಮೇಲೆ ಪರಿಣಾಮ ಉಂಟಾಗುತ್ತದೆ . ಕೃತಿಗಳು ಅಶ್ಲೀಲ, ಅಸಭ್ಯ ಅಂಶಗಳನ್ನು ಹೊಂದಿದ್ದರೆ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮಲಯಾಳಂ ಲೇಖಕ ಎಸ್.ಹರೀಶ್ ಅವರ ವಿವಾದಾಸ್ಪದ ‘ಮೀಶಾ’ ಕಾದಂಬರಿಯ ಕೆಲವು ಅಂಶಗಳನ್ನು ಕೈಬಿಡಲು ಸೂಚಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಳ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರಿದ್ದ ನ್ಯಾಯಪೀಠವು , ಯಾವುದೇ ಕೃತಿಯು ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 292ರಡಿ ಉಲ್ಲೇಖಿಸಿರುವ ಅಂಶವನ್ನು (ಅಶ್ಲೀಲ, ಅಸಭ್ಯ) ಹೊಂದಿದ್ದರೆ ಆಗ ಮಾತ್ರ ಕೃತಿ ನಿಷೇಧಕ್ಕೆ ಮುಂದಾಗಬಹುದು ಎಂದು ತಿಳಿಸಿದೆ.

 ಇದು ಇಂಟರ್‌ನೆಟ್ ಕಾಲ. ಈಗಲೂ ನೀವು ಇಂತಹ ಅನರ್ಥಕ ವಿಷಯಗಳಿಗೆ ಅನವಶ್ಯಕ ಮಹತ್ವ ನೀಡುತ್ತಿದ್ದೀರಿ. ಇದನ್ನು ಒಂದು ವಿವಾದವನ್ನಾಗಿಸುವ ಬದಲು ಮರೆತುಬಿಡುವುದು ಒಳ್ಳೆಯದು ಎಂದು ನ್ಯಾಯಪೀಠ ತಿಳಿಸಿದೆ. ಈ ಕೃತಿಯ ಕೆಲವು ಭಾಗಗಳಲ್ಲಿ ಪುರೋಹಿತ ವರ್ಗದವರನ್ನು ಲೇವಡಿ ಮಾಡಲಾಗಿದ್ದು, ಪತ್ರಿಕೆಯೊಂದರ ಕೃತಿ ವಿಮರ್ಶೆ ವಿಭಾಗದಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

 ಪುಸ್ತಕದ ನಿರೂಪಣಾ ವಿಷಯ ಹಾಗೂ ಪುಸ್ತಕದ ಮೂರು ಭಾಗಗಳ ಕುರಿತು ಟಿಪ್ಪಣಿಯನ್ನು ಐದು ದಿನಗಳ ಒಳಗೆ ಸಲ್ಲಿಸುವಂತೆ ಈ ವಿವಾದಾಸ್ಪದ ಬರಹವನ್ನು ಪ್ರಕಟಿಸಿರುವ ಪತ್ರಿಕೆಗೆ ಸೂಚಿಸಿದ ನ್ಯಾಯಾಲಯ, ಅರ್ಜಿಯ ಕುರಿತ ತೀರ್ಪನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News