×
Ad

ಮೊದಲ ಟೆಸ್ಟ್: ಭಾರತ 274 ರನ್‌ಗೆ ಆಲೌಟ್

Update: 2018-08-02 22:44 IST

ಎಜ್‌ಬಾಸ್ಟನ್, ಆ.2: ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟದಿಂದಾಗಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 274 ರನ್ ಗಳಿಸಿ ಆಲೌಟಾಯಿತು.

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 287 ರನ್‌ಗೆ ನಿಯಂತ್ರಿಸಿದ್ದ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 100 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್‌ನ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಕೊಹ್ಲಿ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದರು. ಇಂಗ್ಲೆಂಡ್‌ಗೆ ಕೇವಲ 13 ರನ್ ಮುನ್ನಡೆ ಬಿಟ್ಟುಕೊಟ್ಟರು.

 ಕೊನೆಯ ವಿಕೆಟ್‌ನಲ್ಲಿ ಉಮೇಶ್ ಯಾದವ್(1)ರೊಂದಿಗೆ 57 ರನ್ ಜೊತೆಯಾಟ ನಡೆಸಿದ ಕೊಹ್ಲಿ ಇಂಗ್ಲೆಂಡ್‌ಗೆ ದೊಡ್ಡ ಮುನ್ನಡೆಯನ್ನು ನಿರಾಕರಿಸಿದರು. ಸ್ಪಿನ್ನರ್ ಆದಿಲ್ ರಶೀದ್ ಅವರು ಕೊಹ್ಲಿ ಇನಿಂಗ್ಸ್‌ಗೆ(149 ,225 ಎಸೆತ, 22 ಬೌಂಡರಿ, 1 ಸಿಕ್ಸರ್)ತೆರೆ ಎಳೆದರು.

ಭಾರತ ಉತ್ತಮ ಆರಂಭ ಪಡೆದಿತ್ತು. ಆದರೆ, ಒಂದೇ ಓವರ್‌ನಲ್ಲಿ ಮುರಳಿ ವಿಜಯ್(20) ಹಾಗೂ ಕೆಎಲ್ ರಾಹುಲ್(4) ವಿಕೆಟ್ ಉಡಾಯಿಸಿದ ಆಲ್‌ರೌಂಡರ್ ಸ್ಯಾಮ್ ಕರನ್ ಆತಿಥೇಯರಿಗೆ ಮೇಲುಗೈ ಒದಗಿಸಿದರು.

ಭಾರತದ ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್(20) ಹಾಗೂ ಶಿಖರ್ ಧವನ್(26) ಮೊದಲ ವಿಕೆಟ್‌ಗೆ 50 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ವಿಜಯ್‌ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಕರನ್ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕನ್ನಡಿಗ ರಾಹುಲ್ ತಾನೆದುರಿಸಿದ 2 ಎಸೆತಗಳಲ್ಲಿ 1 ಬೌಂಡರಿ ಸಹಿತ 4 ರನ್ ಗಳಿಸಿ ಕರನ್‌ಗೆ ಕ್ಲೀನ್‌ಬೌಲ್ಡಾದರು. ತನಗೆ ಲಭಿಸಿದ ಉತ್ತಮ ಅವಕಾಶ ಕೈಚೆಲ್ಲಿದರು.

ಇನ್ನೋರ್ವ ಆರಂಭಿಕ ಆಟಗಾರ ಧವನ್ 20 ರನ್(45 ಎಸೆತ, 4 ಬೌಂಡರಿ)ಗಳಿಸುವ ಮೂಲಕ ಕರನ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಆಗ ಭಾರತದ ಸ್ಕೋರ್ 3 ವಿಕೆಟ್‌ಗೆ 59.

ಆಗ 4ನೇ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ(15) ತಂಡವನ್ನು ಆಧರಿಸುವ ಯತ್ನ ನಡೆಸಿದರು. ರಹಾನೆ ವಿಕೆಟ್ ಉರುಳಿಸಿದ ಸ್ಟೋಕ್ಸ್ ನಾಲ್ಕನೇ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು.

ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ 4 ಎಸೆತಗಳನ್ನು ಎದುರಿಸಿದ್ದರೂ ಖಾತೆ ತೆರೆಯದೇ ಸ್ಟೋಕ್ಸ್‌ಗೆ ಕ್ಲೀನ್‌ಬೌಲ್ಡಾದರು.

ಕೊಹ್ಲಿ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆರನೇ ವಿಕೆಟ್‌ಗೆ 46 ರನ್ ಸೇರಿಸಿದರು. ಬಾಲಂಗೋಚಿಗಳಾದ ಇಶಾಂತ್ ಶರ್ಮ(5) ಹಾಗೂ ಉಮೇಶ್ ಯಾದವ್(1)ನಾಯಕನಿಗೆ ಉತ್ತಮ ಸಾಥ್ ನೀಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಇಂಗ್ಲೆಂಡ್ 287 ರನ್‌ಗೆ ಆಲೌಟ್: ಇದಕ್ಕೆ ಮೊದಲು ಆರ್.ಅಶ್ವಿನ್ ಹಾಗೂ ಮುಹಮ್ಮದ್ ಶಮಿ ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 287 ರನ್‌ಗೆ ಆಲೌಟ್ ಮಾಡಿತು.

2ನೇ ದಿನವಾದ ಗುರುವಾರ 9 ವಿಕೆಟ್‌ಗಳ ನಷ್ಟಕ್ಕೆ 285 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ಸರ್ವಪತನಗೊಂಡಿತು. ಕರನ್(24) ವಿಕೆಟ್ ಕಬಳಿಸಿದ ಮುಹಮ್ಮದ್ ಶಮಿ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಎಳೆದರು.

ಭಾರತದ ಪರ ಸ್ಪಿನ್ನರ್ ಆರ್.ಅಶ್ವಿನ್ 62 ರನ್‌ಗೆ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ವೇಗದ ಬೌಲರ್ ಮುಹಮ್ಮದ್ ಶಮಿ 64 ರನ್ ನೀಡಿ 3 ವಿಕೆಟ್ ಉರುಳಿಸಿದರು. ಉಮೇಶ್ ಯಾದವ್(1ಕ್ಕೆ56) ಹಾಗೂ ಇಶಾಂತ್ ಶರ್ಮ(46ಕ್ಕೆ1)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News