ಉಡುಪಿ ಜಿಲ್ಲೆಯಲ್ಲಿ ಬೂದಿ ಮಿಶ್ರಿತ ಮಳೆ

Update: 2018-08-03 17:01 GMT

ಉಡುಪಿ, ಆ.3: ಉಡುಪಿಯೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು ಅಪರಾಹ್ನ 3 ರಿಂದ 4ಗಂಟೆಯ ಸುಮಾರಿಗೆ ಬೂದಿ ಮಿಶ್ರಿತ ಮಳೆ ಹಾಗೂ ಉಪ್ಪು ಮಿಶ್ರಿತ ಮಳೆ ಸುರಿದ ಬಗ್ಗೆ ವರದಿಗಳು ಬಂದಿವೆ.

ನಗರದ ಅನೇಕ ಕಡೆಗಳಲ್ಲಿ ನಿಲ್ಲಿಸಿದ ವಾಹನಗಳ ಮೇಲೆ ಮಳೆ ಸುರಿದ ನಂತರ ಬಿಳಿ ಬಣ್ಣದ ಬೂದಿ ಹಾಗೂ ಉಪ್ಪು ಮಿಶ್ರಿತ ನೀರು ನಿಂತಿರುವುದು ಕಂಡುಬಂತು. ಕೋಟ, ಕುಂದಾಪುರದ ಕಡೆಯಿಂದಲೂ ಆಮ್ಲ ಮಳೆ ಸುರಿದ ಬಗ್ಗೆ ದೂರುಗಳು ಪತ್ರಿಕಾ ಕಚೇರಿಗೆ ಬಂದವು.

ಉಡುಪಿಯಲ್ಲಿ ನಿಲ್ಲಿಸಿದ ಕಾರು ಹಾಗೂ ಬೈಕ್, ಸ್ಕೂಟರ್‌ಗಳ ಮೇಲೆಲ್ಲಾ ಬೂದಿ ಹಾಗೂ ಉಪ್ಪು ಮಿಶ್ರಿತ ಮಳೆಯ ನೀರು ಕಂಡುಬಂದಿದೆ. ಆದರೆ ಇದರ ಹಿಂದಿನ ಕಾರಣ ಮಾತ್ರ ಗೊತ್ತಾಗಿಲ್ಲ. ಪಡುಬಿದ್ರೆಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಸ್ಥಾವರವೇ ಬೂದಿ ಮಿಶ್ರಿತ ಮಳೆಗೆ ಕಾರಣವೆಂದು ಕೆಲವರು ವಿಶ್ಲೇಷಿಸಿದರು.

ವಾರ್ಷಿಕ ನಿರ್ವಹಣೆಗಾಗಿ ಕಳೆದ ಸುಮಾರು 15 ದಿನಗಳಿಂದ ಯುಪಿಸಿಎಲ್ ಮುಚ್ಚಿದ್ದು, ಎರಡು-ಮೂರು ದಿನಗಳಿಂದ ಅದು ಮತ್ತೆ ಕಾರ್ಯಾರಂಭ ಮಾಡಿದೆ ಎಂದು ಪರಿಸರದ ಜನರು ಪತ್ರಿಕೆಗೆ ತಿಳಿಸಿದರು. ಆದರೆ ಉಡುಪಿ ಆಸುಪಾಸಿನಲ್ಲಿ ಇಂದು ಕಂಡುಬಂದ ಬೂದಿ ಮಿಶ್ರಿತ ಮಳೆಗೆ ಅದು ಕಾರಣವಾಗಿದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News