×
Ad

ಶರೀಫ್ ಪುತ್ರರ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ಗೆ ಇಂಟರ್‌ಪೋಲ್‌ಗೆ ಮನವಿ

Update: 2018-08-04 19:59 IST

ಇಸ್ಲಾಮಾಬಾದ್, ಆ. 4: ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪುತ್ರರಾದ ಹಸನ್ ಮತ್ತು ಹುಸೈನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸುವಂತೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಇಂಟರ್‌ಪೋಲ್‌ಗೆ ಮನವಿ ಮಾಡಿದೆ.

ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ನವಾಝ್ ಶರೀಫ್ ಈಗ ಜೈಲಿನಲ್ಲಿದ್ದಾರೆ.

2017 ಜುಲೈ 28ರಂದು ಸುಪ್ರೀಂ ಕೋರ್ಟ್ ನೀಡಿದ ಸೂಚನೆಯಂತೆ ಶರೀಫ್‌ರೊಂದಿಗೆ ಅವರ ಇಬ್ಬರು ಪುತ್ರರ ವಿರುದ್ಧವೂ ಮೂರು ಭ್ರಷ್ಟಾಚಾರ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.

ಈ ಪ್ರಕರಣಗಳ ವಿಚಾರಣೆಗಳಿಗೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ, ಅವರನ್ನು ತಲೆತಪ್ಪಿಸಿಕೊಂಡವರು ಎಂಬುದಾಗಿ ಅಕೌಂಟಬಿಲಿಟಿ ನ್ಯಾಯಾಲಯವೊಂದು ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ನವಾಝ್ ಶರೀಫ್‌ರ ಪತ್ನಿ ಕುಲ್ಸೂಮ್ ನವಾಝ್ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಕ್ಯಾನ್ಯರ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಸನ್ ಮತ್ತು ಹುಸೈನ್ ಆಸ್ಪತ್ರೆಯಲ್ಲಿ ತಮ್ಮ ತಾಯಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ಅವರನ್ನು ಪಾಕಿಸ್ತಾನಕ್ಕೆ ಕರೆಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಜಾವೇದ್ ಇಕ್ಬಾಲ್ ಆಂತರಿಕ ಸಚಿವಾಲಯಕ್ಕೆ ಸೂಚಿಸಿದ ಬಳಿಕ, ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News