ನಗದು ರಹಿತ ವ್ಯವಹಾರಗಳಿಗೆ ‘ಕ್ಯಾಶ್ ಬ್ಯಾಕ್’: ಪಿಯೂಶ್ ಗೋಯಲ್

Update: 2018-08-04 16:54 GMT

ಹೊಸದಿಲ್ಲಿ, ಆ.4: ರುಪೆ ಕಾರ್ಡ್ ಹಾಗೂ ಭೀಮ್ ಆ್ಯಪ್ ಮೂಲಕ ನಡೆಸುವ ವ್ಯವಹಾರಗಳಿಗೆ ಜಿಎಸ್‌ಟಿಯಡಿ ನಗದುವಾಪಸ್ ನೀಡುವ ಯೋಜನೆಯನ್ನು ರಾಜ್ಯಗಳು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಿವೆ ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ಶನಿವಾರ ತಿಳಿಸಿದ್ದಾರೆ.

ಎಂಎಸ್‌ಎಂಇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಲು ವಿತ್ತ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರ ನೇತೃತ್ವದಲ್ಲಿ ಸಚಿವರ ತಂಡವನ್ನು ರಚಿಸುವ ಬಗ್ಗೆಯೂ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಗೋಯಲ್ ತಿಳಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಕಾನೂನು ಮತ್ತು ಪ್ರಕ್ರಿಯೆ ವಿಷಯಗಳನ್ನು ಕೇಂದ್ರದ ಕಾನೂನು ಸಮಿತಿ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ನೋಡಿಕೊಳ್ಳಲಿದ್ದರೆ ತೆರಿಗೆ ಸಂಬಂಧಿ ವಿಷಯಗಳನ್ನು ತೆರಿಗೆ ಅಧಿಕಾರಿಗಳ ಫಿಟ್ಮೆಂಟ್ ಸಮಿತಿ ನೋಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ನಗದು ವಾಪಸ್ ಯೋಜನೆಯನ್ನು ಅದನ್ನು ಸ್ವಯಂಪ್ರೇರಿತವಾಗಿ ಅನುಷ್ಠಾನ ಮಾಡಲು ಇಚ್ಛಿಸುವ ರಾಜ್ಯಗಳು ಜಾರಿಗೆ ತರಲಿವೆ ಎಂದು ಗೋಯಲ್ ತಿಳಿಸಿದ್ದಾರೆ. ಪ್ರಾಯೋಗಿಕ ಜಾರಿಯಿಂದ ಈ ಯೋಜನೆಯಿಂದ ಉಂಟಾಗಬಹುದಾದ ಲಾಭ ಮತ್ತು ನಷ್ಟದ ಬಗ್ಗೆ ತಿಳಿಯಲು ನೆರವಾಗುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯು ಅನುಷ್ಠಾನಕ್ಕೆ ಬಂದರೆ ರುಪೆ ಕಾರ್ಡ್ ಹಾಗೂ ಭೀಮ್ ಆ್ಯಪ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಒಟ್ಟಾರೆ ಜಿಎಸ್‌ಟಿ ಮೊತ್ತದಲ್ಲಿ ಶೇ.20 (ಗರಿಷ್ಠ 100ರೂ.) ಮರುಪಾವತಿಯಾಗಲಿದೆ. ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನೃತೃತ್ವದ ಸಚಿವರ ಸಮಿತಿ ಶನಿವಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News