ಏರ್‌ಇಂಡಿಯಾ ವಿಮಾನದ ಕಾಕ್‌ಪಿಟ್ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ಬಂಧನ

Update: 2018-08-04 17:47 GMT

ಹೊಸದಿಲ್ಲಿ, ಆ.4: ಇಟಲಿಯ ಮಿಲಾನ್‌ನಿಂದ ಹೊಸದಿಲ್ಲಿಗೆ ಸಂಚರಿಸುತ್ತಿದ್ದ ಏರ್‌ಇಂಡಿಯಾ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ವ್ಯಕ್ತಿಯೊಬ್ಬ ಯತ್ನಿಸಿದ ಘಟನೆ ನಡೆದಿದ್ದು, ಬಳಿಕ ವಿಮಾನವು ಮಿಲಾನ್ ನಿಲ್ದಾಣಕ್ಕೆ ಮರಳಿತು ಎಂದು ಮೂಲಗಳು ತಿಳಿಸಿವೆ.

250 ಪ್ರಯಾಣಿಕರಿದ್ದ ಏರ್‌ಇಂಡಿಯಾ ವಿಮಾನ ಮಿಲಾನ್ ನಿಲ್ದಾಣದಿಂದ ಹೊರಟು ಸುಮಾರು ಒಂದು ಗಂಟೆಯ ಬಳಿಕ ಗುರುಪ್ರೀತ್ ಸಿಂಗ್ ಎಂಬ ವ್ಯಕ್ತಿ ಕಾಕ್‌ಪಿಟ್‌ಗೆ ನುಗ್ಗಲು ಪ್ರಯತ್ನಿಸಿದ. ಆತನನ್ನು ತಡೆಹಿಡಿದು ವಿಮಾನವನ್ನು ಮಿಲಾನ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ನಿಲ್ದಾಣದಿಂದ ಟೇಕ್‌ಆಫ್ ಆಗುವ ಹಂತದಲ್ಲಿ ವಿಮಾನಕ್ಕೆ ಇಂಧನ ತುಂಬಿಸಿದ್ದ ಕಾರಣ, ಮರಳಿ ಲ್ಯಾಂಡ್ ಆಗುವ ಮೊದಲು ಆಗಸದಲ್ಲೇ ಅದರಲ್ಲಿದ್ದ ಇಂಧನವನ್ನು ಕಾಲಿ ಮಾಡಬೇಕಾಯಿತು. ಟ್ಯಾಂಕ್ ಪೂರ್ತಿ ಇಂಧನವಿದ್ದ ಪ್ರಯಾಣಿಕರ ವಿಮಾನವನ್ನು ಲ್ಯಾಂಡ್ ಮಾಡುವುದು ಅಪಾಯಕಾರಿ ಎಂಬ ಕಾರಣಕ್ಕೆ ಪೈಲಟ್ ಹೀಗೆ ಮಾಡಿದ್ದಾರೆ . ಸುಮಾರು ಎರಡೂವರೆ ಗಂಟೆ ವಿಳಂಬದ ಬಳಿಕ ವಿಮಾನ ಸಂಚಾರ ಆರಂಭಿಸಿದೆ ಎಂದು ಏರ್‌ಇಂಡಿಯಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News