ಚಿತ್ರದ, ಪಾತ್ರಗಳ ಹೆಸರುಗಳನ್ನು ಹಿಂದಿಯಲ್ಲೇ ಬರೆಯಿರಿ: ಚಿತ್ರ ನಿರ್ಮಾಪಕರಿಗೆ ಸಚಿವಾಲಯ ಸೂಚನೆ
ಹೊಸದಿಲ್ಲಿ, ಆ.4: ಎಲ್ಲ ಹಿಂದಿ ಸಿನೆಮಾಗಳ ಹೆಸರುಗಳು ಮತ್ತು ಅವುಗಳಲ್ಲಿ ನಟಿಸಿರುವ ವ್ಯಕ್ತಿಗಳ ಹೆಸರುಗಳನ್ನು ಹಿಂದಿಯಲ್ಲೇ ಬರೆಯುವಂತೆ ಸೂಚಿಸಬೇಕಾಗಿ ಹಲವು ಸಿನೆಮಾ ಸಂಘಟನೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ತಿಳಿಸಿದೆ. ಬಹುತೇಕ ಹಿಂದಿ ಸಿನೆಮಾಗಳ ಹೆಸರು ಮತ್ತು ಪಾತ್ರಗಳ ಹೆಸರುಗಳನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿರುವುದು ತನ್ನ ಗಮನಕ್ಕೆ ಬಂದಿರುವುದಾಗಿ ಸಚಿವಾಲಯ, ಇಂಡಿಯನ್ ಮೋಶನ್ ಪಿಕ್ಚರ್ಸ್ ಅಸೋಸಿಯೇಶನ್, ಫಿಲ್ಮ್ ಆ್ಯಂಡ್ ಪ್ರೊಡೂಸರ್ಸ್ ಗಿಲ್ಡ್ ಆಫ್ ಇಂಡಿಯ, ಫಿಲ್ಮ್ ಫೆಡರೇಶನ್ ಆಫ್ ಇಂಡಿಯ, ಇಂಡಿಯನ್ ಫಿಲ್ಮ್ಸ್ ಆ್ಯಂಡ್ ಟಿವಿ ಪ್ರೊಡ್ಯೂಸರ್ಸ್ ಕೌನ್ಸಿಲ್ ಆಫ್ ಇಂಡಿಯ ಹಾಗೂ ಇತರ ಸಂಘಟನೆಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.
ಈ ಸಿನೆಮಾಗಳನ್ನು ಹಿಂದಿ ಭಾಷೆಯಲ್ಲಿ ತಯಾರಿಸಿರುವುದರಿಂದ ಇಂಗ್ಲಿಷ್ ಭಾಷೆ ಅರಿಯದ ಪ್ರೇಕ್ಷಕರು ಈ ಚಿತ್ರದಲ್ಲಿ ನಟಿಸಿರುವ ನಟರ, ಕೆಲಸ ಮಾಡಿರುವ ತಾಂತ್ರಿಕ ವರ್ಗದ ಹಾಗೂ ನಿರ್ಮಾಣದ ಬಗ್ಗೆ ಮಾಹಿತಿಯಿಂದ ವಂಚಿತರಾಗುತ್ತಾರೆ ಎಂದು ಸಚಿವಾಲಯ ತಿಳಿಸಿದೆ. ಹಿಂದಿನ ಸಮಯದಲ್ಲಿ ಚಿತ್ರ ತಯಾರಕರು ಹಲವು ಭಾಷೆಗಳಲ್ಲಿ ಹೆಸರುಗಳನ್ನು ಹಾಕುತ್ತಿದ್ದರು. ಆದರೆ ಈಗ ಕೇವಲ ಇಂಗ್ಲಿಷ್ ನಲ್ಲಿ ಮಾತ್ರ ಹಾಕಲಾಗುತ್ತದೆ. ಈ ವಿಷಯವನ್ನು ಪ್ರೇಕ್ಷಕರ ಹಿತಾಸಕ್ತಿಯ ದೃಷ್ಟಿಯಿಂದ ಎತ್ತಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರ ತಯಾರಕ ಚಂದ್ರಪ್ರಕಾಶ ದ್ವಿವೇದಿ, ಸಚಿವಾಲಯದ ಈ ಪ್ರಸ್ತಾವ ಉತ್ತಮವಾಗಿದ್ದು ಎಲ್ಲ ಹಿಂದಿ ಸಿನೆಮಾಗಳ ಹೆಸರುಗಳು ಮತ್ತು ನಟರ ಹೆಸರುಗಳು ಹಿಂದಿಯಲ್ಲೇ ಇರಬೇಕೆನ್ನುವ ತರ್ಕ ಸರಿಯಾಗಿದೆ. ಆದರೆ ಅದನ್ನೂ ನಮ್ಮ ಚಿತ್ರ ತಯಾರಕರಿಗೆ ಇತರರು ಹೇಳಬೇಕೆನ್ನುವುದೇ ಬೇಸರದ ವಿಷಯ ಎಂದು ತಿಳಿಸಿದ್ದಾರೆ.