ರೈಲ್ವೇ ಉದ್ಯೋಗಿಗಳ ಪೆನ್ಶನ್ ಹೊಣೆ ವಿತ್ತ ಇಲಾಖೆ ವಹಿಸಿಕೊಳ್ಳಲು ಸಲಹೆ

Update: 2018-08-04 17:53 GMT

  ಹೊಸದಿಲ್ಲಿ, ಆ.4: ಇತರ ಎಲ್ಲಾ ಇಲಾಖೆಗಳ ನಿವೃತ್ತ ನೌಕರರ ಪಿಂಚಣಿ ಪಾವತಿ ಜವಾಬ್ದಾರಿಯನ್ನು ವಿತ್ತ ಸಚಿವಾಲಯವೇ ನಿರ್ವಹಿಸುತ್ತದೆ. ಆದ್ದರಿಂದ ರೈಲ್ವೇ ಇಲಾಖೆಯ ಉದ್ಯೋಗಿಗಳ ಪಿಂಚಣಿ ಪಾವತಿಯ ಕನಿಷ್ಟ ಭಾಗಶಃ ಹೊರೆಯನ್ನಾದರೂ ವಿತ್ತ ಸಚಿವಾಲಯ ಹೊರಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.

ಈಗ ರೈಲ್ವೇ ಇಲಾಖೆಯ ಮೇಲೆ ಪಿಂಚಣಿ ಪಾವತಿಯಿಂದ ವಾರ್ಷಿಕ ಸುಮಾರು 50,000 ಕೋ.ರೂ. ಹೊರೆ ಬೀಳುತ್ತಿದೆ ಎಂದು ಆಂತರಿಕ ಸಂಪನ್ಮೂಲ ಉತ್ಪತ್ತಿ ಕುರಿತಾದ ರೈಲ್ವೇಯ ಸಮಾವೇಶ ಸಮಿತಿ ತಿಳಿಸಿದೆ. ಅಲ್ಲದೆ 2016ರ ಜನವರಿಗಿಂತ ಮೊದಲು ನಿವೃತ್ತರಾಗಿರುವ ಎಲ್ಲಾ ಪಿಂಚಣಿದಾರರ ಪಿಂಚಣಿ ಆದೇಶಪತ್ರವನ್ನು ಪರಿಷ್ಕರಿಸಬೇಕಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ತಿಳಿಸಿದ್ದಾರೆ.

ರೈಲ್ವೇ ಸಚಿವಾಲಯದ ಆದಾಯದಿಂದಲೇ ಸಚಿವಾಲಯದ ಖರ್ಚನ್ನು ಸರಿದೂಗಿಸುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಆದ್ದರಿಂದ ಉಳಿದ ಇಲಾಖೆಯ ನಿವೃತ್ತ ಉದ್ಯೋಗಿಗಳ ಪಿಂಚಣಿಯನ್ನು ಭರಿಸುವಂತೆ ರೈಲ್ವೇ ಇಲಾಖೆಯ ಪಿಂಚಣಿಯ ಜವಾಬ್ದಾರಿಯನ್ನೂ ಸರಕಾರ ವಹಿಸಿಕೊಳ್ಳಬೇಕು. ಉದ್ಯೋಗಿಗಳ ವೇತನದ ಸ್ವರೂಪ ಅಥವಾ ಪಿಂಚಣಿಯ ಸ್ವರೂಪ ನಿರ್ಧರಿಸುವಾಗ ರೈಲ್ವೇ ಇಲಾಖೆಯ ಅಭಿಪ್ರಾಯ ಕೇಳುವುದಿಲ್ಲ ಎಂದು ಲೊಹಾನಿ ಹೇಳಿದರು.

ಈ ಸಲಹೆಯನ್ನು ಒಪ್ಪಿದ ಸಮಿತಿಯು ರೈಲ್ವೇ ಮಂಡಳಿ ಈ ಸಲಹೆಯೊಂದಿಗೆ ವಿತ್ತ ಸಚಿವಾಲಯವನ್ನು ಸಂಪರ್ಕಿಸಬೇಕೆಂದು ಅಭಿಪ್ರಾಯಪಟ್ಟಿತು. ಕಳೆದ ಐದು ವರ್ಷಗಳಲ್ಲಿ (2014-15ನ್ನು ಹೊರತುಪಡಿಸಿ) ಆಂತರಿಕ ಸಂಪನ್ಮೂಲ ಕ್ರೋಢೀಕರಣದ ಗುರಿಯನ್ನು ಸಾಧಿಸಲು ವಿಫಲವಾಗಿರುವ ಬಗ್ಗೆ ಬೇಸರವಿದೆ ಎಂದು ಈ ವಾರದ ಆರಂಭದಲ್ಲಿ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ರೈಲ್ವೇ ಮಂಡಳಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News