×
Ad

ಕಲ್ಲಿನ ಕೋರೆಯಲ್ಲಿ ಸ್ಫೋಟ; ಮೃತರ ಸಂಖ್ಯೆ ಹನ್ನೊಂದಕ್ಕೆ

Update: 2018-08-04 23:38 IST

ಕುರ್ನೂಲ್, ಆ.4: ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯ ಕಲ್ಲಿನ ಕೋರೆಯಲ್ಲಿ ಸ್ಫೋಟ ಸಂಭವಿಸಿದ ಪ್ರದೇಶದಿಂದ ಶನಿವಾರ ಪೊಲೀಸರು ಮತ್ತೊಂದು ಶವವನ್ನು ಹೊರತೆಗೆದಿದ್ದು, ಮೂಲಕ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಹನ್ನೊಂದಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಲೂರ್ ಮಂಡಲ್‌ನ ಹತಿ ಬೆಲ್ಗಲ್‌ನಲ್ಲಿರುವ ಕೋರೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಡಿಶಾ ಮೂಲದ ಹನ್ನೊಂದು ಮಂದಿ ಸಾವನ್ನಪ್ಪಿದ್ದರೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. 

ಸ್ಫೋಟಕ್ಕೆ ನಿಖರವಾದ ಕಾರಣವನ್ನು ತನಿಖೆಯ ನಂತರವೇ ಸ್ಪಷ್ಟಪಡಿಸಲಾಗುವುದು ಎಂದು ಕುರ್ನೂಲ್ ಜಿಲ್ಲಾ ಕಲೆಕ್ಟರ್ ಎಸ್. ಸತ್ಯನಾರಾಯಣ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದೆ. ಶುಕ್ರವಾರ ರಾತ್ರಿ ಇಪ್ಪತ್ತು ಕೆಲಸಗಾರರು ಕೋರೆಯಲ್ಲಿ ಕೆಲಸನಿರತರಾಗಿದ್ದ ವೇಳೆ ಸ್ಫೋಟ ನಡೆಸಲು ಬಳಸುವ ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ. ಅನಿರೀಕ್ಷಿತವಾಗಿ ನಡೆದ ಸ್ಫೋಟದಿಂದ ಕೆಲಸಗಾರರು ಕೋರೆಯಿಂದ ಹೊರಗೆ ಬಾರದಂತಾದ ಪರಿಣಾಮ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News