×
Ad

ಝ್ವೆರೆವ್, ಪೆಟ್ಕೊವಿಕ್ ಜಯಭೇರಿ: ವೀನಸ್‌ಗೆ ಸೋಲು

Update: 2018-08-04 23:56 IST

  ವಾಶಿಂಗ್ಟನ್, ಆ.4: ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಹಾಗೂ ಶ್ರೇಯಾಂಕರಹಿತ ಆಟಗಾರ್ತಿ ಆ್ಯಂಡ್ರಿಯ ಪೆಟ್ಕೋವಿಕ್ ಸಿಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಹಾಲಿ ಚಾಂಪಿಯನ್ ಝ್ವೆರೆವ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕಿ ನಿಶಿಕೊರಿಯವರನ್ನು 3-6, 6-1, 6-4 ಸೆಟ್‌ಗಳಿಂದ ಮಣಿಸಿದರು. ಮೂರು ಬಾರಿಯ ಚಾಂಪಿಯನ್ ಆ್ಯಂಡಿ ಮರ್ರೆ ಆಯಾಸದ ಕಾರಣ ನೀಡಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು.

ಮೂರನೇ ಶ್ರೇಯಾಂಕದ ಝ್ವೆರೆವ್ ಈ ವರ್ಷ ಐದನೇ ಬಾರಿ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದ್ದಾರೆ. ಮ್ಯೂನಿಚ್ ಹಾಗೂ ಮ್ಯಾಡ್ರಿಡ್ ಓಪನ್‌ನಲ್ಲಿ ಜಯ ಸಾಧಿಸಿರುವ ಝ್ವೆರೆವ್ ಈ ವರ್ಷದಲ್ಲಿ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2015ರ ಚಾಂಪಿಯನ್ ನಿಶಿಕೊರಿಯವರನ್ನು ಸೋಲಿಸಿರುವ ಝ್ವೆರೆವ್ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ 10ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಲಿದ್ದಾರೆ. ಸಿಟ್‌ಸಿಪಾಸ್ ಕೇವಲ 74 ನಿಮಿಷದಲ್ಲಿ ಬೆಲ್ಜಿಯಂನ 3ನೇ ಶ್ರೇಯಾಂಕದ ಡೇವಿಡ್ ಗಫಿನ್‌ರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

ಬ್ರಿಟನ್ ಆಟಗಾರ ಮರ್ರೆ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ 19ರ ಹರೆಯದ ಆಸ್ಟ್ರೇಲಿಯದ ಆಟಗಾರ ಅಲೆಕ್ಸ್ ಡಿ ಮಿನೌರ್ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಅಲೆಕ್ಸ್ ಮುಂದಿನ ಸುತ್ತಿನಲ್ಲಿ ರಶ್ಯದ ಆ್ಯಂಡ್ರೆ ರುಬ್ಲೆವ್ ಅಥವಾ ಅಮೆರಿಕದ ಡೆನಿಸ್ ಕುಡ್ಲಾರನ್ನು ಎದುರಿಸಲಿದ್ದಾರೆ.

ಪೆಟ್ಕೊವಿಕ್ ಸೆಮಿಗೆ: ಜರ್ಮನಿ ಆಟಗಾರ್ತಿ ಪೆಟ್ಕೋವಿಕ್ ಆರನೇ ಶ್ರೇಯಾಂಕದ ಬೆಲಿಂಡಾ ಬೆನ್‌ಸಿಕ್‌ರನ್ನು ಮಣಿಸುವುದರೊಂದಿಗೆ ಸತತ ಎರಡನೇ ಬಾರಿ ಸಿಟಿ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

2013ರ ರನ್ನರ್ಸ್-ಅಪ್ ಪೆಟ್ಕೊವಿಕ್ ಅವರು ಬೆನ್‌ಸಿಕ್‌ರನ್ನು 6-3,2-6, 7-6(8) ಅಂತರದಿಂದ ಸೋಲಿಸಿದ್ದಾರೆ. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸ್ಲೋಯಾನೆ ಸ್ಟೀಫನ್ಸ್‌ರನ್ನು ಸೋಲಿಸಿದ್ದ ಪೆಟ್ಕೊವಿಕ್ ಟೂರ್ನಿಯಲ್ಲಿ ಶ್ರೇಷ್ಠ ಫಾರ್ಮ್ ಮುಂದುವರಿಸಿದರು.

30ರ ಹರೆಯದ ಪೆಟ್ಕೊವಿಕ್ ಮುಂದಿನ ಸುತ್ತಿನಲ್ಲಿ ಯುಲಿಯಾ ಪುಟಿಂಟ್‌ಸೆವಾ ಅಥವಾ ಸ್ವೆತ್ಲಾನಾ ಕುಝ್ನೆಸೋವಾರನ್ನು ಎದುರಿಸಲಿದ್ದಾರೆ.

ವೀನಸ್‌ಗೆ ಸೋಲು: ಇದೇ ವೇಳೆ, ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.

38ರ ಹರೆಯದ ಆಟಗಾರ್ತಿ ವೀನಸ್ ಅವರು ಮರಿಯಾ ವಿರುದ್ಧ 4-6, 6-7(2) ಸೆಟ್‌ಗಳಿಂದ ಸೋತಿದ್ದಾರೆ. ಮೊದಲ ಸೆಟ್‌ನಲ್ಲಿ 3-0 ಮುನ್ನಡೆ ಹಾಗೂ ಎರಡನೇ ಸೆಟ್‌ನಲ್ಲಿ 5-3 ಮುನ್ನಡೆಯಲ್ಲಿದ್ದ ವಿಲಿಯಮ್ಸ್ ತನಗಿಂತ 15 ವರ್ಷ ಕಿರಿಯ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಲು ವಿಫಲರಾದರು.

ವಿಲಿಯಮ್ಸ್ ಮಾರ್ಚ್ ತಿಂಗಳಿಂದ ಟೂರ್ನಮೆಂಟ್‌ನ ಮೂರನೇ ಸುತ್ತು ದಾಟಲು ವಿಫಲವಾಗುತ್ತಿದ್ದಾರೆ. 2017ರಲ್ಲಿ ಎರಡು ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ವಿಲಿಯಮ್ಸ್ ಇನ್ನಷ್ಟೇ ತನ್ನ ಮೊದಲಿನ ಫಾರ್ಮ್‌ಗೆ ಮರಳಬೇಕಾಗಿದೆ.

ವಿಶ್ವದ ನಂ.49ನೇ ಆಟಗಾರ್ತಿ ಮರಿಯ ಮೊದಲ ಮೂರು ಪಂದ್ಯಗಳಲ್ಲಿ ಸೆಟ್‌ನ್ನು ಕಳೆದುಕೊಳ್ಳದೇ ಪಂದ್ಯ ಜಯಿಸಿದ್ದು ವಿಲಿಯಮ್ಸ್ ವಿರುದ್ಧ 1 ಗಂಟೆ, 43 ನಿಮಿಷಗಳ ಹಣಾಹಣಿಯಲ್ಲಿ ಗೆಲುವು ದಾಖಲಿಸಿದರು.

 ಸಕ್ಕಾರಿ ಮುಂದಿನ ಸುತ್ತಿನಲ್ಲಿ ಅಮೆರಿಕದ ಡೇನಿಯಲ್ ಕಾಲಿನ್ಸ್‌ರನ್ನು ಎದುರಿಸಲಿದ್ದಾರೆ.ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝೆರೆಂಕಾ 2ನೇ ಸೆಟ್‌ನಲ್ಲಿ 0-3 ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾದ ಕಾರಣ ಕಾಲಿನ್ಸ್ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಬ್ರಿಟನ್ ಆಟಗಾರ್ತಿ ಜೋಹನ್ನಾ ಕಾಂಟಾ ಕೂಡ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ. ಕಾಂಟಾ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಎಲಿಸ್ ಮಾರ್ಟೆನ್ಸ್ ವಿರುದ್ಧ 6-7(4), 3-6 ಸೆಟ್‌ಗಳಿಂದ ಸೋತಿದ್ದಾರೆ. ಕಾಂಟಾ ಮಂಗಳವಾರ ನಡೆದ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು 6-1, 6-0 ಅಂತರದಿಂದ ಸೋಲಿಸಿ ಶಾಕ್ ನೀಡಿದ್ದರು. ಸೆರೆನಾ ವೃತ್ತಿಜೀವನದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News