ಮೊಟ್ಟೆ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ....?

Update: 2018-08-05 12:12 GMT

‘ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೆ’ ಎನ್ನುತ್ತದೆ ಒಂದು ಜಾಹೀರಾತು. ಹೌದು,ಮೊಟ್ಟೆಯು ಹಲವಾರು ಆರೋಗ್ಯಲಾಭಗಳನ್ನು ಹೊಂದಿದೆ. ಇದೇ ಕಾರಣದಿಂದ ಜನಪ್ರಿಯವಾಗಿದೆ ಮತ್ತು ಅದು ಪರಿಪೂರ್ಣ ಬ್ರೇಕ್‌ಫಾಸ್ಟ್ ಆಗಿದೆ. ಮಧ್ಯಮ ಗಾತ್ರದ ಬೇಯಿಸಿದ ಮೊಟ್ಟೆಯಲ್ಲಿ ಕೇವಲ 80 ಕ್ಯಾಲರಿಗಳಿರುತ್ತವೆ ಮತ್ತು ಅದು ಪ್ರೋಟಿನ್,ವಿಟಾಮಿನ್‌ಗಳು ಮತ್ತು ಖನಿಜಗಳಂತಹ ಪೌಷ್ಟಿಕಾಂಶಗಳ ಆಗರವಾಗಿದೆ.

ಆದರೆ ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಕೂಡ ಇದೆ. ಹೀಗಾಗಿ ಇದು ಹೃದಯಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ ಮತ್ತು ಇದೇ ಕಾರಣದಿಂದ ಹೆಚ್ಚಿನವರು ಮೊಟ್ಟೆ ಸೇವನೆಗೆ ಮಿತಿಯಿಟ್ಟುಕೊಂಡಿರುತ್ತಾರೆ. ಆದರೆ ಹೃದ್ರೋಗವಿರುವವರು ಮೊಟ್ಟೆಯನ್ನು ತಮ್ಮ ಆಹಾರದಿಂದ ಕೈಬಿಡುವುದು ಒಳ್ಳೆಯದೇ?

ಈ ಬಗ್ಗೆ ಸಂಶೋಧನೆ ಏನು ಹೇಳುತ್ತಿದೆ ನೋಡೋಣ. ಪ್ರತಿ ದಿನ ಮೊಟ್ಟೆ ಸೇವಿಸುವವರಲ್ಲಿ ಹೃದಯ ರಕ್ತನಾಳ ರೋಗಗಳಿಂದ ಸಾವಿಗೆ ಗುರಿಯಾಗುವ ಅಪಾಯ ಶೇ.18ರಷ್ಟು ಕಡಿಮೆಯಿರುತ್ತದೆ. ಅಲ್ಲದೆ ಮೊಟ್ಟೆ ಸೇವಿಸದವರಿಗೆ ಹೋಲಿಸಿದರೆ ದಿನಕ್ಕೊಂದು ಮೊಟ್ಟೆ ತಿನ್ನುವವರಲ್ಲಿ ಹೆಮರೇಜಿಕ್ ಸ್ಟ್ರೋಕ್ ಅಥವಾ ಮಿದುಳಿನ ರಕ್ತನಾಳ ಒಡೆದು ಸಂಭವಿಸುವ ಪಾರ್ಶ್ವವಾಯುವಿನ ಅಪಾಯ ಶೇ.28ರಷ್ಟು ಕಡಿಮೆಯಿರುತ್ತದೆ ಎಂದು ‘ಹಾರ್ಟ್’ ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ತಿಳಿಸಿದೆ.

ದಿನಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಸೇವಿಸುವುದರಿಂದ ಹೃದಯ ರಕ್ತನಾಳ ರೋಗ(ಸಿವಿಡಿ), ಹೃದಯಾಘಾತ,ರಕ್ತದ ಕೊರತೆಯಿಂದ ಉಂಟಾಗುವ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ತಗ್ಗಿಸಬಹುದು ಎನ್ನುವುದನ್ನು ಈ ಅಧ್ಯಯನವು ಸಾಬೀತುಗೊಳಿಸಿದೆ.

ದಿನಕ್ಕೊಂದು ಮೊಟ್ಟೆಯನ್ನು ಸೇವಿಸುವುದರಿಂದ ಹೃದ್ರೋಗಗಳು ಮತ್ತು ಸಾವಿನ ಹೇಳಿಕೊಳ್ಳುವಂಥ ಅಪಾಯವೇನೂ ಉಂಟಾಗುವುದಿಲ್ಲ. ಆದರೆ ಟೈಪ್ 2 ಮಧುಮೇಹದಂತಹ ಹೃದಯ ರಕ್ತನಾಳ ಸಂಬಂಧಿ ರೋಗಿಗಳು ಆರೋಗ್ಯಕರ ಜೀವನಶೈಲಿಯನ್ನು ಹೊಂದಿದ್ದರೆ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು ಎಂದು ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟಗೊಂಡಿರುವ 2018ರ ಅಧ್ಯಯನ ವರದಿಯೊಂದು ಹೇಳಿದೆ.

 ಆದರೆ,ಆರೋಗ್ಯಕರ ಆಹಾರ ಶೈಲಿಯ ಜೊತೆ ದೈನಂದಿನ ಕೊಲೆಸ್ಟ್ರಾಲ್ ಸೇವನೆ 300 ಮಿ.ಗ್ರಾಂ ಮೀರಬಾರದು. ಕೊಲೆಸ್ಟ್ರಾಲ್ ಸೇವನೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಬದಲು ಚರ್ಬಿ ಅಥವಾ ಕೊಬಿನ ಮಟ್ಟವನ್ನು ನಿಯಂತ್ರಣದಲ್ಲಿಡಲು ಹಣ್ಣುಗಳು,ತರಕಾರಿಗಳು,ಇಡಿಯ ಧಾನ್ಯಗಳು,ಕಡಿಮೆ ಕೊಬ್ಬಿರುವ ಡೇರಿ ಉತ್ಪನ್ನಗಳು,ಮೊಟ್ಟೆ,ಮೀನು ಇತ್ಯಾದಿಗಳ ಸೇವನೆಗೆ ಆದ್ಯತೆ ನೀಡಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ತನ್ನ ಇತ್ತೀಚಿನ ಮಾರ್ಗಸೂಚಿಗಳಲ್ಲಿ ಹೇಳಿದೆ.

ಯಾವುದು ಆರೋಗ್ಯಕರ...ಮೊಟ್ಟೆಯ ಹಳದಿ ಅಥವಾ ಬಿಳಿಯ ಭಾಗ?

ಮೊಟ್ಟೆಯ ಪೌಷ್ಟಿಕಾಂಶ ವೌಲ್ಯಗಳು ಅದರ ಬಿಳಿಯ ಭಾಗದಲ್ಲಿರುವ ಪ್ರೋಟಿನ್ ಮತ್ತು ವಿಟಾಮಿನ್ ಡಿ,ಎ ಮತ್ತು ಬಿ12,ಕ್ಯಾಲ್ಸಿಯಂ,ಕಬ್ಬಿಣ ಮತ್ತು ಫಾಲಿಕ್ ಆ್ಯಸಿಡ್‌ನ್ನು ಆಧರಿಸಿವೆ.

 ಮೊಟ್ಟೆಯ ಬಿಳಿಯ ಭಾಗವು ಕೊಬ್ಬು ಮುಕ್ತವಾಗಿದೆ,ಆದರೆ ಹಳದಿ ಭಾಗವು ಸುಮಾರು 200 ಎಂ.ಜಿಗಳಷ್ಟು ಕೊಲೆಸ್ಟ್ರಾಲ್ ಮತ್ತು ಕೇವಲ 1.5 ಗ್ರಾಂ ಸ್ಯಾಚ್ಯುರೇಟೆಡ್ ಫ್ಯಾಟ್ ಸೇರಿದಂತೆ ಐದು ಗ್ರಾಮ್‌ನಷ್ಟು ಒಟ್ಟು ಕೊಬ್ಬನ್ನು ಒಳಗೊಂಡಿದೆ. ಸ್ಯಾಚ್ಯುರೇಟೆಡ್ ಫ್ಯಾಟ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿದರೆ ಪಾಲಿಅನ್‌ಸ್ಯಾಚುರೇಟೆಡ್ ಮತ್ತು ಮೊನೊಅನ್‌ಸ್ಯಾಚ್ಯುರೇಟೆಡ್ ಫ್ಯಾಟ್‌ಗಳಂತಹ ಅನ್‌ಸ್ಯಾಚ್ಯುರೇಟೆಡ್ ಫ್ಯಾಟ್ ಹೃದಯಕ್ಕೆ ಒಳ್ಳೆಯದು. ಅಲ್ಲದೆ ಮೊಟ್ಟೆಯನ್ನು ದಿನನಿತ್ಯ ಸೇವಿಸಿದರೆ ಲಿಪೊಪ್ರೋಟಿನ್(ಕೊಲೆಸ್ಟ್ರಾಲ್‌ನ ಒಂದು ವಿಧ) ಪಾರ್ಟಿಕಲ್ ಪ್ರೊಫೈಲ್ ಉತ್ತಮಗೊಳ್ಳುತ್ತದೆ ಮತ್ತು ಎಚ್‌ಡಿಎಲ್ (ಒಳ್ಳೆಯ ಕೊಲೆಸ್ಟ್ರಾಲ್)ನ ಕಾರ್ಯಕ್ಷಮತೆ ಹೆಚ್ಚುತ್ತದೆ.

ಮೊಟ್ಟೆಯ ಬಿಳಿಯ ಭಾಗವು ಅತ್ಯುತ್ತಮ ಗುಣಮಟ್ಟದ ಪ್ರೋಟಿನ್‌ನ ಅಮೂಲ್ಯ ಮೂಲ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಹಳದಿ ಭಾಗದ ಬಗ್ಗೆ ಹೇಳುವುದಾದರೆ ಸಿವಿಡಿ ಅಥವಾ ಅಧಿಕ ಕೊಲೆಸ್ಟ್ರಾಲ್ ಮಟ್ಟ ಹೊಂದಿದವರು ಅದನ್ನು ವರ್ಜಿಸುವುದು ಒಳ್ಳೆಯದು. ಮೊಟ್ಟೆಯನ್ನು ಹುರಿಯುವುದರಿಂದ ಅದರಲ್ಲಿಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ,ಹೀಗಾಗಿ ಹುರಿದ ಮೊಟ್ಟೆಗಿಂತ ಬೇಯಿಸಿದ ಮೊಟ್ಟೆಯನ್ನು ಸೇವಿಸುವುದು ಒಳ್ಳೆಯದು. ಹೃದ್ರೋಗಿಗಳು ಮೊಟ್ಟೆಗಳ ಸೇವನೆ ಆರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿದರೆ ಅವರು ನಿಮ್ಮ ವೈದ್ಯಕೀಯ ಇತಿಹಾಸವನ್ನು ಆಧರಿಸಿ ಸೂಕ್ತ ಸಲಹೆ ನೀಡಬಲ್ಲರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News