ಸೇನೆಯಿಂದ ಗುಂಡಿನ ದಾಳಿ ಓರ್ವ ಸಾವು, ಇನ್ನೋರ್ವನಿಗೆ ಗಾಯ
ಬನಿಹಾಲ್, ಆ. 5: ಜಮ್ಮು ಹಾಗೂ ಕಾಶ್ಮೀರದ ರಾಂಬಾನ್ ಜಿಲ್ಲೆಯಲ್ಲಿ ರವಿವಾರ ಯೋಧರು ಗುಂಡು ಹಾರಿಸಿದ ಪರಿಣಾಮ ಓರ್ವ ದನದ ವ್ಯಾಪಾರಿ ಹಾಗೂ ಇನ್ನೋರ್ವ ಗಾಯಗೊಂಡಿದ್ದಾರೆ. ಕೋಹಿಲ್ ಗ್ರಾಮದಲ್ಲಿ 58 ರಾಷ್ಟ್ರೀಯ ರೈಫಲ್ಸ್‌ನ ಯೋಧರು ಮುಂಜಾನೆ 4 ಗಂಟೆಗೆ ಗೂಲ್‌ನ ನಿವಾಸಿಗಳಾದ ಮುಹಮ್ಮದ್ ರಫೀಕ್ ಗುಜ್ಜರ್ (28) ಹಾಗೂ ಶಕೀಲ್ ಅಹ್ಮದ್ (30) ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಗುಜ್ಜರ್ ಸ್ಥಳದಲ್ಲೇ ಮೃತಪಟ್ಟರು ಹಾಗೂ ಅಹ್ಮದ್ ಗಂಭೀರ ಗಾಯಗೊಂಡರು. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರು ಜಾನುವಾರು ವ್ಯಾಪಾರಿಗಳು. ವ್ಯಾಪಾರಕ್ಕಾಗಿ ಅವರು ಈ ಗ್ರಾಮಕ್ಕೆ ಆಗಮಿಸಿದ್ದರು. ಎಂದು ಅರೆಸೇನಾ ಪಡೆಯ ಪ್ರಾಥಮಿಕ ತನಿಖೆ ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಓರ್ವ ನಾಗರಿಕ ಮೃತಪಟ್ಟಿರುವುದು ಹಾಗೂ ಇನ್ನೋರ್ವ ಗಾಯಗೊಂಡಿರುವುದನ್ನು ರಾಂಬಾನ್‌ನ ಪೊಲೀಸ್ ಅಧೀಕ್ಷಕ ಮೋಹನ್ ಲಾಲ್ ದೃಢಪಡಿಸಿದ್ದಾರೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಮಾಹಿತಿ ವರದಿ ದಾಖಲಿಸಿ ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
‘‘ತನಿಖೆ ಮುಂದುವರಿದಿದೆ. ಯೋಧರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. ಈ ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಯೋಧರು ಗುಂಡು ಹಾರಿಸಿದರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.