ಮಮತಾ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸಲು ನನ್ನ ವಿರೋಧವಿಲ್ಲ:ದೇವೇಗೌಡ
ಹೊಸದಿಲ್ಲಿ,ಆ.5: ಬಿಜೆಪಿ ವಿರುದ್ಧ ಬಲಿಷ್ಠ ಮೈತ್ರಿಕೂಟ ರಚನೆಗೆ ರವಿವಾರ ಇಲ್ಲಿ ಒತ್ತು ನೀಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು,2019ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರತಿಪಕ್ಷಗಳ ಪ್ರಧಾನಿ ಹುದ್ದೆಯ ಅಭ್ಯರ್ಥಿಯೆಂದು ಬಿಂಬಿಸಲು ತನ್ನ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಹುದ್ದೆಗೆ ಅಭ್ಯರ್ಥಿಯ ವಿಷಯವನ್ನು ಚುನಾವಣೆಗೆ ಮೊದಲೇ ಕೈಗೆತ್ತಿಕೊಂಡರೆ ಪ್ರತಿಪಕ್ಷಗಳ ಒಗ್ಗಟ್ಟಿಗೆ ಹಾನಿಯಾಗಬಹುದೆಂದು ಭಾವಿಸಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಈ ವಿಷಯವನ್ನು ಚುನಾವಣೆಯ ಬಳಿಕವೇ ಚರ್ಚಿಸಲು ನಿರ್ಧರಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೇವೇಗೌಡರ ಈ ಹೇಳಿಕೆ ಹೊರಬಿದ್ದಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲವಿಲ್ಲದ ಪ್ರತಿಪಕ್ಷಗಳ ಮೈತ್ರಿಕೂಟದ ಯಾವುದೇ ಪಕ್ಷದ ನಾಯಕರನ್ನು ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ತನ್ನ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಪಕ್ಷ ಕೆಲವು ದಿನಗಳ ಹಿಂದೆ ಹೇಳಿತ್ತು.
ಬಿಜೆಪಿಯನ್ನು ಅಧಿಕಾರದಿಂದ ಉರುಳಿಸುವ ಪ್ರಯತ್ನವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡ ತಿಳಿಸಿದರು.
ತೃತೀಯ ರಂಗದ ರಚನೆಯು ಇನ್ನೂ ಆರಂಭದ ಹಂತದಲ್ಲಿದೆ ಎಂದು ಬೆಟ್ಟುಮಾಡಿದ ಅವರು, ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಂದುಗೂಡಿಸಲು ಬ್ಯಾನರ್ಜಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂದರು.
ಬ್ಯಾನರ್ಜಿಯವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಬಿಂಬಿಸುವುದನ್ನು ನೀವು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ,ಅದನ್ನು ತಾನು ಸ್ವಾಗತಿಸುತ್ತೇನೆ. ಇಂದಿರಾ ಗಾಂಧಿಯವರು 17 ವರ್ಷ ಪ್ರಧಾನಿಯಾಗಿದ್ದರು. ಪುರುಷರೇ ಏಕೆ ಪ್ರಧಾನಿಯಾಗಬೇಕು? ಮಮತಾ ಅಥವಾ ಮಾಯಾವತಿ ಏಕಾಗಬಾರದು ಎಂದು ದೇವೇಗೌಡ ಮರುಪ್ರಶ್ನಿಸಿದರು.
ಮಹಿಳೆ ಪ್ರಧಾನಿಯಾಗಲು ತನ್ನ ವಿರೋಧವಿಲ್ಲವೆಂದ ಅವರು,ತಾನು 1996ರಲ್ಲಿಯೇ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿದ್ದೆ ಎಂದರು.
ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಲು ತನ್ನ ಜೆಡಿಎಸ್ ಪಕ್ಷ ಈವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದ ಅವರು,ಆದರೆ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇತರ ಪಕ್ಷಗಳೊಂದಿಗೆ ಸಹಕರಿಸಲು ತನ್ನ ಪಕ್ಷವು ಸಿದ್ಧವಿದೆ ಎಂದರು.
ದೇಶದಲ್ಲಿಂದು ಭೀತಿಯ ಭಾವನೆ ಕಾಡುತ್ತಿದೆ. ಉತ್ತರ ಪ್ರದೇಶ,ಬಿಹಾರ ಮತ್ತು ಗುಜರಾತಗಳಂತಹ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಉಸಿರುಗಟ್ಟಿಸುವ ವಾತಾವರಣವಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಬಲಿಷ್ಠ ಪ್ರತಿಪಕ್ಷ ಮೈತ್ರಿಕೂಟ ಅಗತ್ಯವಾಗಿದೆ ಎಂದು ದೇವೇಗೌಡ ತಿಳಿಸಿದರು.
ಬಿಜೆಪಿಗೆ ರಾಜಕೀಯ ಪರ್ಯಾಯ ಬೇಕು ಎಂಬ ಕೂಗು ಕ್ರಮೇಣ ಶಕ್ತಿ ಪಡೆದುಕೊಳ್ಳಲಿದೆ ಎಂದ ಅವರು,ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೂಡ ಈ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಒತ್ತಿ ನುಡಿದರು.
ಮುಂದಿನ 2-3 ತಿಂಗಳುಗಳಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡೋಣ ಎಂದರು.
2019ರ ಚುನಾವಣೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಎದುರಿಸಲಿವೆ,ಆದರೆ ಸ್ಥಾನ ಹಂಚಿಕೆಯ ಬಗ್ಗೆ ಇನ್ನೂ ಚರ್ಚಿಸಿಲ್ಲ ಎಂದು ದೇವೇಗೌಡ ತಿಳಿಸಿದರು.