ಉಡುಪಿ ಸರಕಾರಿ ಮಹಿಳಾ ಕಾಲೇಜಿಗೆ 50ಲಕ್ಷ ವೆಚ್ಚದಲ್ಲಿ ಪ್ರಯೋಗಾಲಯ: ಜಿ.ಶಂಕರ್ ಭರವಸೆ

Update: 2018-08-06 12:29 GMT

ಉಡುಪಿ, ಆ.6: ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನೂತನವಾಗಿ ಆರಂಭಗೊಂಡಿರುವ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗವನ್ನು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹಾಗೂ ಕಾಲೇಜಿನ ಮಹಾಪೋಷಕ ಡಾ.ಜಿ.ಶಂಕರ್ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕಾಲೇಜಿನ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗಕ್ಕೆ ಅಗತ್ಯವಾಗಿ ಪ್ರಯೋಗಾಲಯವನ್ನು 40-50ಲಕ್ಷ ರೂ. ವೆಚ್ಚದಲ್ಲಿ ಟ್ರಸ್ಟ್‌ನಿಂದ ಸ್ಥಾಪಿಸಲಾಗುವುದು. ಸರಕಾರ ಜಾಗ ನೀಡಿದರೆ ಕಾಲೇಜಿಗೆ ಬೇಕಾದ ಮೂರು ಅಂತಸ್ತಿನ ಹಾಸ್ಟೆಲ್‌ನ್ನು ನಿರ್ಮಿಸಿಕೊಡಲಾಗುವುದು. ಈ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಶಿಸ್ತು ಮುಖ್ಯ. ಕಾಲೇಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನಮಗೆ ತಿಳಿಸಿ. ಆದರೆ ಮುಷ್ಕರ ನಡೆಸಬೇಡಿ. ಉಪನ್ಯಾಸಕರ ನಡುವಿನ ರಾಜಕೀಯಕ್ಕೆ ತಲೆಕೆಡಿಸಿಕೊಳ್ಳದೆ, ಕಲಿಯುವುದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ(ಪರೀಕ್ಷಾಂಗ) ಡಾ.ಎ.ಎಂ. ಖಾನ್ ಮಾತನಾಡಿ, ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ರಸಾಯನ ಶಾಸ್ತ್ರ ವಿಭಾಗಕ್ಕೆ 25 ಸೀಟುಗಳನ್ನು ವಿವಿಯು ಮಂಜೂರು ಮಾಡಿದೆ. ವಿದ್ಯಾರ್ಥಿ ಗಳು ಸರಕಾರಿ ಕಾಲೇಜು ಎಂಬ ಕೀಳರಿಮೆಯಿಂದ ಹೊರಬಂದು, ಖಾಸಗಿ ಶಾಲೆಗಳನ್ನು ಸರಕಾರಿ ಶಾಲೆಗಳಿಗೆ ಹೋಲಿಕೆ ಮಾಡುವಂತಹ ಮಟ್ಟಕ್ಕೆ ಬೆಳೆಯ ಬೇಕು ಎಂದರು.

ಸರಕಾರಿ ಕಾಲೇಜುಗಳಲ್ಲಿ ಕಲಿಯುವುದಕ್ಕೂ ಅದೃಷ್ಟ ಬೇಕು. ಇಲ್ಲಿ ಎಲ್ಲ ಜನಾಂಗ, ಜಾತಿಯವರು ಕಲಿಯುವುದರಿಂದ ಅವರ ಸಂಸ್ಕೃತಿಯನ್ನು ಅರಿತು ಕೊಳ್ಳುವ ಮೂಲಕ ವ್ಯಕ್ತಿತ್ವ ವಿಕನಸಕ್ಕೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಲೇಜುಗಳು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಮಹೇಶ್ ರಾವ್ ಮಾತನಾಡಿ ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿದ್ದರು.

ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಪ್ರೊ.ರಾಮಚಂದ್ರ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಪ್ರಸಾದ್ ಕೆ. ವಂದಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೇಶವ ಮೂರ್ತಿಎಂ.ವಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News