12 ವರ್ಷಗಳ ನಂತರ ಪೆಪ್ಸಿಕೊ ಸಿಇಒ ಹುದ್ದೆಯಿಂದ ಕೆಳಗಿಳಿಯಲಿರುವ ಇಂದ್ರಾ ನೂಯಿ
ನ್ಯೂಯಾರ್ಕ್, ಆ. 6: ಪೆಪ್ಸಿಕೊ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಭಾರತ ಮೂಲದ ಇಂದ್ರಾ ನೂಯಿ, 12 ವರ್ಷಗಳ ಕಾಲ ಕಂಪೆನಿಯನ್ನು ಮುನ್ನಡೆಸಿದ ಬಳಿಕ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಅವರು ಕಂಪೆನಿಯನ್ನು ಬದಲಾಗುತ್ತಿರುವ ಬಳಕೆದಾರರ ಅಭಿರುಚಿಗೆ ತಕ್ಕಂತೆ ಮಾರ್ಪಡಿಸಿದ್ದರು.
ಅಕ್ಟೋಬರ್ 3ರಿಂದ ಜಾರಿಗೆ ಬರುವಂತೆ 62 ವರ್ಷದ ಇಂದ್ರಾ ನೂಯಿಯ ಸ್ಥಾನವನ್ನು ಕಂಪೆನಿಯ ಅಧ್ಯಕ್ಷ ರಾಮೊನ್ ಲಗ್ವಾರ್ತ ವಹಿಸಿಕೊಳ್ಳಲಿದ್ದಾರೆ. ಬಳಿಕ, 2019ರ ಆದಿ ಭಾಗದವರೆಗೆ ಕಂಪೆನಿಯ ಅಧ್ಯಕ್ಷೆಯಾಗಿ ನೂಯಿ ಮುಂದುವರಿಯಲಿದ್ದಾರೆ.
‘‘ಭಾರತದಲ್ಲಿ ಬೆಳೆದ ನಾನು ಇಂಥ ಬೃಹತ್ ಕಂಪೆನಿಯನ್ನು ಮುನ್ನಡೆಸುವ ಅವಕಾಶ ಲಭಿಸುತ್ತದೆ ಎಂದು ನಾನು ಎಂದೂ ಊಹಿಸಿರಲಿಲ್ಲ’’ ಎಂದು ನೂಯಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
2006ರಲ್ಲಿ ಕಂಪೆನಿಯ ಚುಕ್ಕಾಣಿಯನ್ನು ವಹಿಸಿಕೊಂಡಾಗ 35 ಬಿಲಿಯ ಡಾಲರ್ (2.41 ಲಕ್ಷ ಕೋಟಿ ರೂಪಾಯಿ) ಇದ್ದ ಕಂಪೆನಿಯ ವಾರ್ಷಿಕ ವರಮಾನ 2017ರಲ್ಲಿ 63.5 ಬಿಲಿಯ ಡಾಲರ್ (4.37 ಲಕ್ಷ ಕೋಟಿ ರೂಪಾಯಿ)ಗೆ ಏರಿದೆ.