×
Ad

ಲಷ್ಕರ್ ಭಯೋತ್ಪಾದಕನ ನಿರ್ವಾಹಕ ದಿಲ್ಲಿಯಲ್ಲಿ ಸೆರೆ

Update: 2018-08-06 21:53 IST

ಹೊಸದಿಲ್ಲಿ, ಆ.6: ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಭಯೋತ್ಪಾದಕ ನಿರ್ವಾಹಕ ಹಬೀಬುರ್ರಹ್ಮಾನ್ ಅಲಿಯಾಸ್ ಹಬೀಬ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ರವಿವಾರ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಹಬೀಬ್ ಒಡಿಶಾದ ಕೇಂದ್ರಪಾಡಾ ಮೂಲದವನಾಗಿದ್ದು, ಹಾಲಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನೆಲೆಸಿದ್ದ.

ಹಬೀಬ್ 2007ರಲ್ಲಿ ಬಾಂಗ್ಲಾದೇಶದ ಮೂಲಕ ಭಾರತದೊಳಗೆ ಓರ್ವ ಕಾಶ್ಮೀರಿ ಮತ್ತು ಇಬ್ಬರು ಪಾಕಿಸ್ತಾನಿ ಭಯೋತ್ಪಾಕರನ್ನು ನುಸುಳುಸಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲ್ಪಟ್ಟಿದ್ದ ಲಷ್ಕರ್ ಭಯೋತ್ಪಾದಕ ಶೇಖ್ ಅಬ್ದುಲ್ ನಯೀಂ ಅಲಿಯಾಸ್ ನೋಮಿ ಎಂಬಾತನ ನಿರ್ವಾಹಕರಲ್ಲೋರ್ವನಾಗಿದ್ದ ಎಂದು ಎನ್‌ಐಎ ತಿಳಿಸಿದೆ.

ನಂತರ 2024, ಆಗಸ್ಟ್‌ನಲ್ಲಿ ನೋಮಿಯನ್ನು ಕೋಲ್ಕತಾದಿಂದ ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಆತ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ. ಅದರ ನಂತರ ಆತ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಲ್ಲಿನ ತನ್ನ ನಿರ್ವಾಹಕರ ನಿರ್ದೇಶದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಸೇರ್ಪಡೆಗೊಂಡಿದ್ದ.

ಭಯೋತ್ಪಾದಕ ದಾಳಿಗಳನ್ನು ನಡೆಸಬಹುದಾದ ಸ್ಥಳಗಳನ್ನು ಗುರುತಿಸುವ ಹೊಣೆಗಾರಿಕೆಯನ್ನು ನೋಮಿಗೆ ವಹಿಸಲಾಗಿತ್ತು. ಇದಕ್ಕಾಗಿ ಆತ ವಿವಿಧ ನಕಲಿ ಗುರುತುಗಳೊಂದಿಗೆ ಜಮ್ಮು-ಕಾಶ್ಮೀರ,ಹಿಮಾಚಲ ಪ್ರದೇಶ ಮತ್ತು ಚಂಢೀಗಡ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದ. ಪಾಕಿಸ್ತಾನದಲ್ಲಿಯ ಲಷ್ಕರ್ ಭಯೋತ್ಪಾದಕ ಅಮ್ಜದ್ ಅಲಿಯಾಸ್ ರೆಹಾನ್‌ನ ಆಣತಿಯಂತೆ ಹಬೀಬ್ ವಿವಿಧ ಸಂದರ್ಭಗಳಲ್ಲಿ ನೋಮಿಗಾಗಿ ಅಡಗುದಾಣಗಳು ಮತ್ತು ಹಣಕಾಸಿನ ವ್ಯವಸ್ಥೆ ಮಾಡಿದ್ದ ಎಂದು ಎನ್‌ಐಎ ತಿಳಿಸಿದೆ.

ಎನ್‌ಐಎ 2017, ನವೆಂಬರ್‌ನಲ್ಲಿ ನೋಮಿಯನ್ನು ಪುನಃ ಬಂಧಿಸಿತ್ತು ಮತ್ತು ಹಬೀಬ್ ಸೇರಿದಂತೆ 10 ಇತರ ಸಹಆರೋಪಿಗಳೊಂದಿಗೆ ಆತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ದಾಖಲಿಸಿತ್ತು.

ಹಬೀಬ್‌ನನ್ನು ಸೋಮವಾರ ದಿಲ್ಲಿಯ ಪಟಿಯಾಳಾ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು,ಆತನಿಗೆ ಎನ್‌ಐಎ ಕಸ್ಟಡಿಯನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News