ಪ್ರತೀಕಾರ, ವಾಮಾಚಾರಕ್ಕಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ

Update: 2018-08-06 16:27 GMT

ತಿರುವನಂತಪುರ, ಆ.6: ಕೇರಳದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿಯ ಆಘಾತಕಾರಿ ವಿವರಗಳನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ನಾಲ್ವರನ್ನೂ ಕೊಂದು ಅವರ ಶವಗಳನ್ನು ಗುಂಡಿಯಲ್ಲಿ ಹೂಳಲಾಗಿತ್ತು.

ರಬ್ಬರ್ ತೋಟದ ಮಾಲಿಕ ಕೃಷ್ಣನ್(52),ಆತನ ಪತ್ನಿ ಸುಶೀಲಾ(50),ಪುತ್ರಿ ಅರ್ಷಾ(21) ಮತ್ತು ಪುತ್ರ ಅರ್ಜುನ್(19) ಅವರು ಕಳೆದ ತಿಂಗಳು ಥೋಡುಪುಝಾದಿಂದ ನಾಪತ್ತೆಯಾಗಿದ್ದರು.

ನಾಲ್ಕು ದಿನಗಳಿಂದಲೂ ಇವರ್ಯಾರೂ ಕಂಡು ಬಂದಿರದಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ತೆರಳಿದ್ದ ನೆರೆಹೊರೆಯವರು ಮತ್ತು ಕೆಲವು ಬಂಧುಗಳು ನೆಲ ಮತ್ತು ಗೋಡೆಗಳ ಮೇಲೆ ರಕ್ತದ ಕಲೆಗಳನ್ನು ಕಂಡು ಶಂಕೆಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಯಲ್ಲಿ ಒಂದು ಸುತ್ತಿಗೆ ಮತ್ತು ಚೂರಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ವಾಮಾಚಾರದ ಬಗ್ಗೆ ಶಂಕಿಸಿದ್ದರು.

ಪ್ರಕರಣದ ಮುಖ್ಯ ಆರೋಪಿಯಾಗಿರುವ ಅನೀಶ್ ವಾಮಾಚಾರದಲ್ಲಿ ಪಳಗಿದ್ದ. ಕಳೆದ ಕೆಲವು ತಿಂಗಳುಗಳಿಂದ ತನ್ನ ಶಕ್ತಿ ಕೆಲಸ ಮಾಡುತ್ತಿಲ್ಲವೆಂದು ಆತ ಚಿಂತೆಗೊಳಗಾಗಿದ್ದ. ತನ್ನ ಗುರು ಕೃಷ್ಣನ್ ತನ್ನ ಶಕ್ತಿಯನ್ನು ವಾಪಸ್ ಪಡೆದಿರಬಹುದು ಎಂದು ಆತ ಹೆದರಿದ್ದ ಮತ್ತು ಅದನ್ನು ಮರಳಿ ಪಡೆಯಲು ಸಹವರ್ತಿ ಲಿಜಿನ್ ಜೊತೆ ಸೇರಿಕೊಂಡು ಕಳೆದ ಆರು ತಿಂಗಳುಗಳಿಂದಲೂ ಕೃಷ್ಣನ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಎಂದು ಇಡುಕ್ಕಿ ಎಸ್‌ಪಿ ಕೆ.ಬಿ.ವೇಣುಗೋಪಾಲ್ ಅವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಅನೀಶ್ ತಲೆಮರೆಸಿಕೊಂಡಿದ್ದು,ಲಿಜಿನ್‌ನನ್ನು ಬಂಧಿಸಲಾಗಿದೆ. ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಜು.29ರಂದು ರಾತ್ರಿ ಕೃಷ್ಣನ್ ನಿವಾಸಕ್ಕೆ ತೆರಳಿದ್ದ ಅನೀಶ್ ಮತ್ತು ಲಿಜಿನ್ ವಿದ್ಯುತ್ ಫ್ಯೂಜ್‌ನ್ನು ಕಿತ್ತಿದ್ದರು. ಹಟ್ಟಿಯಲ್ಲಿದ್ದ ಆಡುಗಳು ಮತ್ತು ಜಾನುವಾರುಗಳ ಚೀರಾಟ ಕೇಳಿ ಮನೆಯಿಂದ ಹೊರಗೆ ಬಂದಿದ್ದ ಕೃಷ್ಣನ್ ಮತ್ತು ಪತಿಯನ್ನು ಹುಡುಕಿಕೊಂಡು ಬಂದಿದ್ದ ಸುಶೀಲಾಗೂ ಕಬ್ಬಿಣದ ಸರಳಿನಿಂದ ಬಡಿದು ಕೊಲ್ಲಲಾಗಿತ್ತು. ಮಕ್ಕಳನ್ನೂ ಬಿಟ್ಟಿರಲಿಲ್ಲ. ಶವಗಳನ್ನು ಮನೆಯಲ್ಲಿಟ್ಟು ತೆರಳಿದ್ದ ಅವರು ಮರುದಿನ ರಾತ್ರಿ 11 ಗಂಟೆಯ ಸುಮಾರಿಗೆ ಮರಳಿ ಬಂದಾಗ ಅರ್ಜುನ್ ಇನ್ನೂ ಉಸಿರಾಡುತ್ತಿದ್ದ. ಆತನನ್ನು ಚೂರಿಯಿಂದ ಇರಿದು,ಸುತ್ತಿಗೆಯಿಂದ ಬಡಿದು ಕೊಲೆ ಮಾಡಿದ ಆರೋಪಿಗಳು ಹಿತ್ತಲಿನಲ್ಲಿ ಗುಂಡಿಯನ್ನು ತೋರಿ ಶವಗಳನ್ನು ಹೂತು ಹಾಕಿದ್ದರು. ಕುಟುಂಬದ ಸದಸ್ಯರನ್ನು ಹೂಳುವಾಗ ಅರ್ಜುನ ಸತ್ತಿರಲಿಕ್ಕಿಲ್ಲ ಎಂದು ನಾವು ಶಂಕಿಸಿದ್ದೇವೆ ಎಂದು ವೇಣುಗೋಪಾಲ್ ಹೇಳಿದರು.

ಕಸದ ಬುಟ್ಟಿಯಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧನದಿಂದ ತಪ್ಪಿಸಿಕೊಳ್ಳಲು ಅನೀಶ್ ಹತ್ಯೆಗಳ ಬಳಿಕ ಪೂಜೆಯನ್ನು ನೆರವೇರಿಸಿ ಹುಂಜವೊಂದನ್ನು ಬಲಿ ನೀಡಿದ್ದ ಎಂದು ಲಿಜಿನ್ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News