ವಿದೇಶಿಯರಿಗೆ ಜಿಎಸ್‌ಟಿ ಮರುಪಾವತಿಯಿಲ್ಲ: ಸರಕಾರ

Update: 2018-08-06 16:28 GMT

ಹೊಸದಿಲ್ಲಿ, ಆ.6: ಸರಕಾರವು ಏಕೀಕೃತ ಸರಕುಗಳು ಮತ್ತು ಸೇವೆಗಳ ಕಾಯ್ದೆ (ಐಜಿಎಸ್‌ಟಿ)ಯ ಸಂಬಂಧಿತ ನಿಯಮಗಳನ್ನು ಇನ್ನೂ ಜಾರಿಗೊಳಿಸಿಲ್ಲ,ಹೀಗಾಗಿ ಭಾರತಕ್ಕೆ ಬರುವ ವಿದೇಶಿಯರು ಇಲ್ಲಿ ಖರೀದಿಸಿ ಸ್ವದೇಶಕ್ಕೆ ಒಯ್ಯುವ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ವಿತ್ತ ಸಚಿವಾಲಯವು ಆರ್‌ಟಿಐ ಉತ್ತರವೊಂದರಲ್ಲಿ ತಿಳಿಸಿದೆ.

ವಿದೇಶಿಯರು ತಾವು ಭಾರತದಲ್ಲಿ ಖರೀದಿಸುವ ವಸ್ತುಗಳ ಮೇಲಿನ ಜಿಎಸ್‌ಟಿಯ ಮರುಪಾವತಿಗಾಗಿ ಅನುಸರಿಸಬೇಕಾದ ವಿಧಿವಿಧಾನಗಳ ವಿವರ ನೀಡುವಂತೆ ಆರ್‌ಟಿಐ ಅರ್ಜಿದಾರರು ಕೋರಿದ್ದರು.

ಕೆಲವು ಪಾಶ್ಚಾತ್ಯ ದೇಶಗಳಲ್ಲಿ ವಿದೇಶಿಯರು ಅಲ್ಲಿ ಖರೀದಿಸಿದ ವಸ್ತುಗಳ ಮೇಲಿನ ಕೆಲವು ತೆರಿಗೆಗಳನ್ನು ವಾಪಸ್ ಮಾಡುವ ಕ್ರಮವಿದೆ.

 ಐಜಿಎಸ್‌ಟಿಯ ಕಲಂ 15ನ್ನು ಇನ್ನೂ ಜಾರಿಗೊಳಿಸಿಲ್ಲ. ಹೀಗಾಗಿ ಸದ್ಯ ನಿಮಗೆ ನೀಡಬಹುದಾದ ಯಾವುದೇ ಮಾಹಿತಿಯಿಲ್ಲ ಎಂದು ವಿತ್ತ ಇಲಾಖೆ ಅಧೀನದ ಕೇಂದ್ರೀಯ ನೇರ ಮತ್ತು ಪರೋಕ್ಷ ತೆರಿಗೆಗಳು ಮತ್ತು ಸೀಮಾಶುಲ್ಕ ಮಂಡಳಿ(ಸಿಬಿಐಸಿ)ಯು ತನ್ನ ಉತ್ತರದಲ್ಲಿ ತಿಳಿಸಿದೆ. ಕಲಂ 15 ಆರು ತಿಂಗಳಿಗೂ ಹೆಚ್ಚಿನ ಅವಧಿಗೆ ಭಾರತದಲ್ಲಿ ವಾಸ್ತವ್ಯವಿರದ ವಿದೇಶಿ ಪ್ರವಾಸಿಗಳು ಇಲ್ಲಿ ಖರೀದಿಸಿದ ವಸ್ತುಗಳ ಮೇಲಿನ ಜಿಎಸ್‌ಟಿಯ ಮರುಪಾವತಿಗೆ ಅವಕಾಶ ಕಲ್ಪಿಸುತ್ತದೆ.

 ಐಜಿಎಸ್‌ಟಿ ಸರಕುಗಳು ಅಥವಾ ಸೇವೆಗಳು ಅಥವಾ ಉಭಯ ವಿಧಗಳ ಅಂತರರಾಜ್ಯ ಪೂರೈಕೆಯ ಮೇಲೆ ತೆರಿಗೆಯನ್ನು ವಿಧಿಸಲು ಕೇಂದ್ರ ಸರಕಾರಕ್ಕೆ ಅವಕಾಶವನ್ನು ಕಲ್ಪಿಸಿದೆ.

   ಸರಕಾರವು ವಿದೇಶಿ ಪ್ರವಾಸಿಗಳು ಭಾರತದಲ್ಲಿ ಪಾವತಿಸಿರುವ ಜಿಎಸ್‌ಟಿಯ ವಾಪಸಾತಿಗಾಗಿ ನಿಬಂಧನೆಗಳು,ಷರತ್ತುಗಳು ಮತ್ತು ಸುರಕ್ಷತಾ ಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದ ತೆರಿಗೆ ಸಲಹೆಗಾರ ಸಂದೀಪ ಚಿಲ್ಲಾನಾ ಅವರು, ಜಿಎಸ್‌ಟಿಯು ಬಳಕೆ ಆಧರಿತ ತೆರಿಗೆಯಾಗಿದೆ. ಖರೀದಿಸಿದ ವಸ್ತು ಭಾರತದಲ್ಲಿ ಬಳಕೆಯಾದರೆ ತೆರಿಗೆ ಇಲ್ಲಿಯೇ ಉಳಿಯಬೇಕು. ಆದರೆ ವಸ್ತುಗಳನ್ನು ಭಾರತದಲ್ಲಿ ಖರೀದಿಸಿ ವಿದೇಶಗಳಿಗೆ ಒಯ್ಯುವುದಾದರೆ ಅದನ್ನು ರಫ್ತು ಎಂದು ಪರಿಗಣಿಸಬೇಕು ಮತ್ತು ತೆರಿಗೆಯನ್ನು ಮರುಪಾವತಿಸಬೇಕು. ವಿದೇಶಿ ಪ್ರವಾಸಿಗಳು ಭಾರತದಿಂದ ನಿರ್ಗಮಿಸುವಾಗ ಅಗತ್ಯ ದಾಖಲೆಗಳು ಮತ್ತು ಖರೀದಿ ಬಿಲ್‌ಗಳನ್ನು ತೋರಿಸಿ ಜಿಎಸ್‌ಟಿಯನ್ನು ವಾಪಸ್ ಪಡೆಯಲು ಸಾಧ್ಯವಾಗುವಂತೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮರುಪಾವತಿ ಕೌಂಟರ್‌ಗಳನ್ನು ತೆರೆಯಬೇಕು. ಜಿಎಸ್‌ಟಿ ವಾಪಸ್ ಸಿಗುತ್ತದೆ ಎಂದಾದರೆ ಪ್ರವಾಸಿಗಳು ಹೆಚ್ಚಿನ ಖರೀದಿಗಳನ್ನು ಮಾಡುತ್ತಾರೆ. ಇದರಿಂದ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ ಮತ್ತು ವಿದೇಶಿಯರಿಂದ ವಿದೇಶಿ ವಿನಿಮಯ ಸಂಗ್ರಹಿಸಲು ನೆರವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News