ವಿಮಾನ, ಡ್ರೋನ್ ಉತ್ಪಾದನೆಗೆ ನೀಲನಕ್ಷೆ ಎರಡು ಕ್ಷಿಪ್ರ ಕಾರ್ಯ ಪಡೆ ರಚನೆ; ಸುರೇಶ್ ಪ್ರಭು

Update: 2018-08-06 17:43 GMT

ಹೊಸದಿಲ್ಲಿ, ಆ. 6: ಭಾರತದಲ್ಲಿ ವಿಮಾನಗಳು ಹಾಗೂ ಡ್ರೋನ್‌ಗಳ ಉತ್ಪಾದನೆಗೆ ನೀಲನಕ್ಷೆ ಸಿದ್ದಗೊಳಿಸಲು ಎರಡು ಕ್ಷಿಪ್ರ ಕಾರ್ಯ ಪಡೆ ರಚಿಸಲಾಗಿದೆ ಎಂದು ಸರಕಾರ ಸೋಮವಾರ ಸಂಸತ್ತಿನಲ್ಲಿ ಮಾಹಿತಿ ನೀಡಿತು.

 ಇದು ದೇಶದಲ್ಲಿ ಉದ್ಯೋಗವನ್ನು ಕೂಡ ಸೃಷ್ಟಿಸಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಸುರೇಶ್ ಪ್ರಭು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುರೇಶ್ ಪ್ರಭು, ಮುಂದಿನ ವರ್ಷಗಳಲ್ಲಿ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿಮಾನಗಳ ನಿಯೋಜನೆ ಆಗಲಿರುವುದರಿಂದ ವಿಮಾನ ನಿರ್ಮಾಣ ತ್ವರಿತ ಬೆಳೆಯುವ ಕ್ಷೇತ್ರವಾಗಲಿದೆ ಎಂದರು. ವಿಮಾನ ಕಾರ್ಖಾನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಎರಡು ಕ್ಷಿಪ್ರ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಒಂದು ವಿಮಾನಗಳ ಉತ್ಪಾದನೆಯ ಸಾಧ್ಯತೆ ಶೋಧಿಸಲಿದೆ. ಇನ್ನೊಂದು ಡ್ರೋನ್‌ಗಳನ್ನು ಉತ್ಪಾದಿಸಲಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ತಿಳಿಸಿದರು.

 ಭಾರತದ ವಿಮಾನ ನಿರ್ಮಾಣ ಕ್ಷೇತ್ರ ಶೇ. 20ರಷ್ಟು ಬೆಳವಣಿಗೆಯಾಗುತ್ತಿದೆ. ಭವಿಷ್ಯದಲ್ಲಿ ಸರಕಾರ 1000ಕ್ಕೂ ಅಧಿಕ ವಿಮಾನಗಳನ್ನು ಖರೀದಿಸಲಿದೆ ಎಂದು ಸುರೇಶ್ ಪ್ರಭು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News