×
Ad

ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಕೇರಳದ ಪಾದ್ರಿಗಳಿಗೆ ಶರಣಾಗುವಂತೆ ಸುಪ್ರೀಂ ಸೂಚನೆ

Update: 2018-08-06 23:21 IST

ಹೊಸದಿಲ್ಲಿ, ಆ.6: ವಿವಾಹಿತ ಮಹಿಳೆಯೋರ್ವಳ ತಪ್ಪೊಪ್ಪಿಗೆ ಹೇಳಿಕೆಯನ್ನು ದುರುಪಯೋಗಿಸಿಕೊಂಡು ಆಕೆಯನ್ನು ಲೈಂಗಿಕವಾಗಿ ಶೋಷಿಸಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇರಳದ ಇಬ್ಬರು ಪಾದ್ರಿಗಳಿಗೆ ನೀಡಿದ್ದ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ಸೋಮವಾರ ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು ಆ.13ರೊಳಗೆ ಶರಣಾಗುವಂತೆ ಅವರಿಗೆ ನಿರ್ದೇಶ ನೀಡಿದೆ.

ಆರೋಪಿಗಳು ಶರಣಾಗತರಾದ ಬಳಿಕ ಜಾಮೀನು ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠವು ತಿಳಿಸಿತು. ಆರೋಪಿಗಳು ಕೆಲವು ವೀಡಿಯೊಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಮತ್ತು ಅದನ್ನು ಬಳಸಿಕೊಂಡು ಮಹಿಳೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆಯ ಪರ ವಕೀಲರು ಆರೋಪಿಸಿದ್ದರು.

ಮಲಂಕರ ಸಿರಿಯನ್ ಆರ್ಥೊಡೆಕ್ಸ್ ಚರ್ಚ್‌ನ ನಾಲ್ವರು ಪಾದ್ರಿಗಳು ಭಾಗಿಯಾಗಿದ್ದ ಲೈಂಗಿಕ ಶೋಷಣೆ ಪ್ರಕರಣದ ಈವರೆಗಿನ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಈ ಮೊದಲು ರಾಜ್ಯ ಪೊಲೀಸರಿಗೆ ಸೂಚಿಸಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪಾದ್ರಿಗಳ ಪೈಕಿ ಇಬ್ಬರು ಈಗಾಗಲೇ ಶರಣಾಗಿದ್ದು,ಫಾ.ಸೋನಿ ವರ್ಗೀಸ್ ಮತ್ತು ಫಾ.ಜೈಸ್ ಕೆ.ಜಾರ್ಜ್ ಅವರು ನಿರೀಕ್ಷಣಾ ಜಾಮೀನು ಕೋರಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ,ಜು.11ರಂದು ಅದು ತಿರಸ್ಕೃತಗೊಂಡಿತ್ತು. ಅದರ ವಿರುದ್ಧ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯು ಇತ್ಯರ್ಥಗೊಳ್ಳುವವರೆಗೆ ಅವರನ್ನು ಬಂಧಿಸದಂತೆ ಸರ್ವೋಚ್ಚ ನ್ಯಾಯಾಲಯವು ಜು.19ರಂದು ಮಧ್ಯಂತರ ಆದೇಶವನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News