ರಿಯಾದ್‌ನ ಟ್ಯಾಕ್ಸಿವೇದಿಂದ ವಿಮಾನ ಹಾರಿಸಲು ಪ್ರಯತ್ನಿಸಿದ್ದ ಜೆಟ್ ಪೈಲಟ್‌ಗಳಿಬ್ಬರ ಅಮಾನತು
ಮುಂಬೈ, ಆ.6: ಶುಕ್ರವಾರ ಸೌದಿ ಅರೇಬಿಯಾದ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ಪ್ರಯಾಣಿಕರ ಪ್ರಾಣಗಳನ್ನು ಪಣಕ್ಕಿಟ್ಟು ರನ್‌ವೇ ಬದಲು ಟ್ಯಾಕ್ಸಿವೇದಿಂದ ವಿಮಾನದ ಟೇಕ್-ಆಫ್‌ಗೆ ಪ್ರಯತ್ನಿಸಿದ್ದ ಜೆಟ್ ಏರ್‌ವೇಸ್‌ನ ಇಬ್ಬರು ಪೈಲಟ್‌ಗಳ ಪರವಾನಿಗೆಗಳನ್ನು ಅಮಾನತುಗೊಳಿಸಲಾಗಿದ್ದು,ಅವುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮುಂಬೈಗೆ ಆಗಮಿಸಲಿದ್ದ ವಿಮಾನವು ಮಧ್ಯರಾತ್ರಿಯ ಬಳಿಕ ಟೇಕ್-ಆಫ್‌ಗೆ ಪ್ರಯತ್ನಿಸಿತ್ತು. ಗೋಚರತೆ ಅತ್ಯಂತ ಸ್ಪಷ್ಟವಾಗಿತ್ತು ಮತ್ತು ರನ್‌ವೇದಲ್ಲಿ ಯಾವುದೇ ತಡೆಗಳಿರಲಿಲ್ಲ. ಆದರೆ ಟ್ಯಾಕ್ಸಿ ವೇದಲ್ಲಿ ಸಂಪೂರ್ಣ ಟೇಕ್-ಆಫ್ ವೇಗದಿಂದ ಸಾಗಿದ್ದ ವಿಮಾನ ಅದನ್ನು ಮೀರಿ ಕಚ್ಚಾ ಪ್ರದೇಶಕ್ಕೆ ನುಗ್ಗಿತ್ತು. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ತಕ್ಷಣವೇ ತುರ್ತು ವ್ಯವಸ್ಥೆಯ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ವಿಮಾನದಿಂದ ತೆರವುಗೊಳಿಸಿದ್ದರು ಎಂದು ಸೌದಿ ಅರೇಬಿಯಾದ ವಾಯುಯಾನ ಘಟಕವು ಹೇಳಿಕೆಯಲ್ಲಿ ತಿಳಿಸಿದೆ.
ಸೌದಿ ಹೇಳಿಕೆಗೆ ಮುನ್ನ ಭಾರತದನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ಅಧಿಕಾರಿಯೋರ್ವರು,ರನ್‌ವೇದಲ್ಲಿ ತಡೆಯಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಪೈಲಟ್‌ಗಳು ಟೇಕ್-ಆಫ್ ಅನ್ನು ಕೈಬಿಟ್ಟಿದ್ದರು. ಏಕಾಏಕಿ ನಿಲ್ಲಿಸಿದ್ದರಿಂದ ವಿಮಾನವು ರನ್‌ವೇನಿಂದ ಹೊರಕ್ಕೆ ಹೊರಳಿತ್ತು ಎಂದು ತಿಳಿಸಿದ್ದರು.
ಇಬ್ಬರೂ ಪೈಲಟ್‌ಗಳ ಪರವಾನಿಗೆಗಳನ್ನು ಅಮಾನತುಗೊಳಿಸಲಾಗಿದೆ,ತನಿಖೆ ಬಾಕಿಯಿದೆ ಎಂದು ಡಿಜಿಸಿಎ ಸೋಮವಾರ ತಿಳಿಸಿದೆ.
ಜೆಟ್ ಏರವೇಸ್ ಕೂಡ ಟ್ವೀಟೊಂದರಲ್ಲಿ ವಿಮಾನವು ಟೇಕ್-ಆಫ್ ಪ್ರಯತ್ನ ನಿಲ್ಲಿಸಿದ್ದರಿಂದ ರನ್‌ವೇನಿಂದ ಹೊರಗೆ ಜಾರಿತ್ತು ಎಂದು ಹೇಳಿಕೊಂಡಿತ್ತು.
ಸೌದಿ ಮತ್ತು ಭಾರತೀಯ ವಾಯುಯಾನ ಅಧಿಕಾರಿಗಳು ಈ ಬಗ್ಗೆ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.