ತಮಿಳುನಾಡಿನ ಮಾಜಿ ಸಿಎಂ, ‘ಕಲೈಙರ್’ ಕರುಣಾನಿಧಿ ಇನ್ನಿಲ್ಲ

Update: 2018-08-08 06:34 GMT

ಚೆನ್ನೈ, ಆ.7: ಇಲ್ಲಿನ ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಕರುಣಾನಿಧಿ ಇಂದು ನಿಧನರಾದರು.

94ರ ಹರೆಯದ ಕರುಣಾನಿಧಿ ಕಳೆದ ಜು.29ರಿಂದ ಕಾವೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದರು. ಕರುಣಾನಿಧಿ ಆರೋಗ್ಯ ಮತ್ತಷ್ಟು ಬಿಗಡಾಯಿಸಿ ಸಂಜೆ 6.10ಕ್ಕೆ ನಿಧನರಾದರು  ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮುತ್ತುವೇಲ ಕರುಣಾನಿಧಿ 1924,ಜೂ.3ರಂದು ತಂಜಾವೂರು ಜಿಲ್ಲೆಯ ತಿರುಕುಲವೈ ಎಂಬಲ್ಲಿ ಮುತ್ತುವೇಲಾರ್ ಕರುಣಾನಿಧಿ-ಅಂಜುಗಂ ಕರುಣಾನಿಧಿ ದಂಪತಿಗೆ ಜನಿಸಿದ್ದರು.ಅವರು ಹುಟ್ಟಿದಾಗ ಅವರಿಗೆ ದಕ್ಷಿಣಾಮೂರ್ತಿ ಎಂದು ನಾಮಕರಣ ಮಾಡಲಾಗಿತ್ತು. ತಮಿಳುನಾಡಿನ ಜನರ ನಡುವೆ ಅವರು ‘ಕಲೈನಾರ್’ಎಂದೇ ಖ್ಯಾತರಾಗಿದ್ದರು.

ತನ್ನ 14ನೆಯ ವಯಸ್ಸಿನಲ್ಲಿಯೇ ರಾಜಕೀಯವನ್ನು ಪ್ರವೇಶಿಸಿದ್ದ ಅವರು ಹಿಂದಿ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು ಮತ್ತು ಸ್ಥಳೀಯ ಯುವಜನರಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ನಂತರ ಹಸ್ತಲಿಖಿತ ‘ಮಾನವರ ನೇಸನ್’ ಪತ್ರಿಕೆಯನ್ನು ಸಂಘದ ಸದಸ್ಯರಿಗೆ ವಿತರಿಸುತ್ತಿದ್ದರು. ನಂತರ ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಘಟಕ ತಮಿಳುನಾಡು ತಮಿಳ ಮಾನವರ ಮಂಡ್ರಂ ಅನ್ನು ಹುಟ್ಟುಹಾಕಿದ್ದರು.

 1957ರಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಕುಳಿತಲೈ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ತಮಿಳುನಾಡು ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಕರುಣಾನಿಧಿ 1961ರಲ್ಲಿ ಪಕ್ಷದ ಖಜಾಂಚಿಯಾಗಿದ್ದರು. 1967ರಲ್ಲಿ ಡಿಎಂಕೆ ರಾಜ್ಯದಲ್ಲಿ ಅಧಿಕಾರಕ್ಕೇರಿದಾಗ ಅವರು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದರು. 1969ರಲ್ಲಿ ಅಣ್ಣಾದುರೈ ನಿಧನರಾದಾಗ ಪಕ್ಷದ ಮುಖ್ಯಸ್ಥನ ಹುದ್ದೆ ಅವರಿಗೆ ಒಲಿದಿತ್ತು ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದರು.  ಐದು ಬಾರಿ ಮುಖ್ಯ ಮಂತ್ರಿಯಾಗಿ, ಮೂರು ಬಾರಿ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ್ದರು. 1957ರಿಂದ 2016ರ ತನಕ ಸತತ 13 ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1984ರಲ್ಲಿ ಮಾತ್ರ ಅವರು ಸ್ಪರ್ಧಿಸಿರಲಿಲ್ಲ.

 1947ರಲ್ಲಿ ತೆರೆ ಕಂಡಿದ್ದ ರಾಜಕುಮಾರಿ ಚಿತ್ರಕ್ಕೆ ಚಿತ್ರಕಥೆ ಬರೆಯುವ ಮೂಲಕ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು. ಚಿತ್ರದ ಯಶಸ್ಸು ಅವರು ಚಿತ್ರರಂಗದಲ್ಲಿ ಮುಂದುವರಿಯುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News