ಕೊಚ್ಚಿ: ಮೀನುಗಾರಿಕೆ ದೋಣಿಗೆ ಹಡಗು ಢಿಕ್ಕಿ; ಮೂವರ ಸಾವು

Update: 2018-08-07 17:17 GMT

 ಕೊಚ್ಚಿ, ಆ. 7: ಕೊಚ್ಚಿಯ ಸಮುದ್ರ ಮಧ್ಯೆ ಮಂಗಳವಾರ ಮುಂಜಾನೆ ಸುಮಾರು 3.30ಕ್ಕೆ ಅಪರಿಚಿತ ಹಡಗೊಂದು ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ದೋಣಿಯಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಹಾಗೂ 9 ಮಂದಿ ನಾಪತ್ತೆಯಾಗಿದ್ದಾರೆ.

 ಮೀನುಗಾರಿಕಾ ದೋಣಿಯಲ್ಲಿ 14 ಮಂದಿ ಇದ್ದರು. ನಡು ಸಮುದ್ರದಲ್ಲಿ ಹಡಗು ಢಿಕ್ಕಿ ಹೊಡೆದ ಪರಿಣಾಮ ದೋಣಿಗೆ ಸಂಪೂರ್ಣ ಹಾನಿಯಾಗಿದೆ. ಕೆಲಸಗಾರರಲ್ಲಿ 11 ಮಂದಿ ತಮಿಳುನಾಡಿನವರು. ಇಬ್ಬರು ಪಶ್ಚಿಮಬಂಗಾಳ ಹಾಗೂ ಓರ್ವ ಕೇರಳದವರು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್. ಮಹೇಶ್ ತಿಳಿಸಿದ್ದಾರೆ. ಮೃತಪಟ್ಟವರನ್ನು ಯುವನಾಥನ್ (45), ಮಾನಕ್ಕುಡಿ (50) ಹಾಗೂ ಯಾಕೂಬ್ (57) ಎಂದು ಗುರುತಿಸಲಾಗಿದೆ. ಎಲ್ಲರೂ ತಮಿಳುನಾಡಿನ ರಾಮನ್‌ಥುರೈಯ ನಿವಾಸಿಗಳು.

 ಮೃತದೇಹಗಳನ್ನು ಮುನಾಂಬಾಮ್ ಬಂದರಿಗೆ ತರಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬಂಗಾಳದ ನಿವಾಸಿ ನರೇನ್ ಸರ್ಕಾರ್ (20) ಹಾಗೂ ತಮಿಳುನಾಡಿನ ಕೊಲಚೇಲ್ ನಿವಾಸಿ ಎಡ್ವಿನ್ (29) ಎಂದು ಗುರುತಿಸಲಾಗಿದೆ. ಅವರನ್ನು ರಕ್ಷಣಾ ದೋಣಿಯ ಮೂಲಕ ದಡಕ್ಕೆ ತರಲಾಯಿತು. ಅವರನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆ ನಾಟ್ಟಿಕಾ ತೀರದಿಂದ 23 ನಾವಿಕ ಮೈಲು ದೂರದಲ್ಲಿ ಸಂಭವಿಸಿದೆ. ಮೀನುಗಾರಿಕೆ ನಡೆಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಹಡಗೊಂದು ದೋಣಿಗೆ ಢಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News