ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ ಚಿದಂಬರಂ, ಕಾರ್ತಿ ಮಧ್ಯಂತರ ರಕ್ಷಣೆ ವಿಸ್ತರಣೆ
ಹೊಸದಿಲ್ಲಿ, ಆ. 7: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ದಾಖಲಿಸಿದ ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ ಅಕ್ಟೋಬರ್ 8ರ ವರೆಗೆ ವಿಸ್ತರಿಸಿದೆ.
ಮುಖ್ಯ ನ್ಯಾಯವಾದಿ ಆರೋಗ್ಯ ಸರಿ ಇಲ್ಲ. ಆದುದರಿಂದ ಸಮಯಾವಕಾಶ ನೀಡುವಂತೆ ಸಿಬಿಐ ಹಾಗೂ ಇಡಿ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ತಿಳಿಸಿದ ಬಳಿಕ ವಿಶೇಷ ಸಿಬಿಐ ನ್ಯಾಯಮೂರ್ತಿ ಒ.ಪಿ. ಸಹಾನಿ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದರು. ವಿವರ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶದ ಅಗತ್ಯತೆ ಇದೆ ಎಂದು ಸಿಬಿಐ ಹಾಗೂ ಇಡಿ ಪರ ಹಾಜರಾದ ನ್ಯಾಯವಾದಿಗಳಾದ ಕೆ.ಕೆ. ಗೋಯಲ್ ಹಾಗೂ ನಿತೇಶ್ ರಾಣಾ ನ್ಯಾಯಾಲಯಕ್ಕೆ ತಿಳಿಸಿದರು ಹಾಗೂ ಚಿದಂಬರಂ ಅವರು ವಕೀಲ ಅರ್ಶದೀಪ್ ಸಿಂಗ್ ಮೂಲಕ ಸಲ್ಲಿಸಿದ ಮನವಿಯ ವಿರುದ್ಧ ವಾದಿಸಿದರು. ಸಿಬಿಐ ಜುಲೈ 19ರಂದು ದಾಖಲಿಸಿದ ಈ ಪ್ರಕರಣದ ಆರೋಪ ಪಟ್ಟಿಯಲ್ಲಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಹೆಸರನ್ನು ಉಲ್ಲೇಖಿಸಲಾಗಿದೆ.