ಕಾರಡ್ಕ ಬಳಿಕ ಎಣ್ಮಕಜೆ ಗ್ರಾಮ ಪಂಚಾಯತ್‌ನಲ್ಲೂ ಅಧಿಕಾರ ಕಳೆದುಕೊಂಡ ಬಿಜೆಪಿ

Update: 2018-08-08 07:20 GMT


ಕಾಸರಗೋಡು, ಆ.8: ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿಯ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲಿತ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಗೆಲುವು ಲಭಿಸಿದ್ದು, ಇದರಿಂದ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ.

ಕೆಲ ದಿನಗಳ ಹಿಂದೆ ಕಾರಡ್ಕ ಗ್ರಾಮ ಪಂಚಾಯತ್ ನಲ್ಲೂ ಆಡಳಿತರೂಢ ಬಿಜೆಪಿಯ ವಿರುದ್ಧ ಎಲ್‌ಡಿಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿತ್ತು. ಅಲ್ಲಿ ಆಡಳಿತ ಕಳೆದುಕೊಂಡಿದ್ದ ಬಿಜೆಪಿಗೆ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಆಘಾತ ಉಂಟಾಗಿದೆ.

ಯುಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸಿಪಿಎಂ ಮತ್ತು ಸಿಪಿಐ ಬೆಂಬಲ ನೀಡಿದವು. ಇದರಿಂದ 10-7 ಅಂತರದಿಂದ ಗೊತ್ತುವಳಿಗೆ ಜಯ ಲಭಿಸಿತು. ಇದರೊಂದಿಗೆ ಬಿಜೆಪಿ ಬೆಂಬಲಿತ ಗ್ರಾಪಂ ಆಡಳಿತ ಅಧಿಕಾರ ಕಳೆದುಕೊಂಡಿತು. ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಚರ್ಚೆಯ ಬಳಿಕ ಮತದಾನ ನಡೆಯಿತು.

2015 ರಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಏಳು ಸ್ಥಾನಗಳನ್ನು ಗಳಿಸಿತ್ತು. ಸಿಪಿಎಂ ಎರಡು ಮತ್ತು ಸಿಪಿಐ ಒಂದು ಸ್ಥಾನ ಜಯಿಸಿತ್ತು. ಯಾರಿಗೂ ಸ್ಪಷ್ಟ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ನಡೆದು ಬಿಜೆಪಿಗೆ ಅದೃಷ್ಟ ಒಲಿದಿತ್ತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್ ವಿರುದ್ಧ ಕಾಂಗ್ರೆಸ್‌ನ ವೈ.ಶಾರದಾ ಮತ್ತು ಉಪಾಧ್ಯಕ್ಷ ಕೆ.ಪುಟ್ಟಪ್ಪ ವಿರುದ್ಧ ಮುಸ್ಲಿಮ್ ಲೀಗ್‌ನ ಸಿದ್ದೀಕ್ ಒಳಮೊಗರು ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದರು. ಉಪಾಧ್ಯಕ್ಷರ ವಿರುದ್ಧ ನಾಳೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ

ಕಳೆದ ವಾರ ಕಾರಡ್ಕ ಗ್ರಾಮ ಪಂಚಾಯತ್‌ನಲ್ಲಿ ಎಲ್.ಡಿ.ಎಫ್. ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯು.ಡಿ.ಎಫ್. ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಇದೀಗ ಎಣ್ಮಕಜೆಯಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News