ಎಸ್ಸಿ-ಎಸ್ಟಿ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ- ಸೌಲಭ್ಯ ಪಡೆದರೆ ಕ್ರಿಮಿನಲ್ ಕೇಸ್: ಡಾ. ಸಂತೋಷ್ ಕುಮಾರ್ ಎಚ್ಚರಿಕೆ

Update: 2018-08-08 08:18 GMT

ಮಂಗಳೂರು, ಆ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡು ಸೌಲಭ್ಯಗಳನ್ನು ಪಡೆಯುವುದು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಮಂಗಳೂರು ತಾಲೂಕು ಪ್ರೊಬೆಷನರಿ ಸಹಾಯಕ ಆಯುಕ್ತ ಡಾ.ಸಂತೋಷ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಇಂದು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕುಂದುಕೊರತೆ ಸಮಿತಿ ಸಭೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರು ಮಾತನಾಡುತ್ತಿದ್ದರು.

ನಗರದಲ್ಲಿ ಬೋವಿ ಜನಾಂಗದ ಕೆಲವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ತಮಿಳುನಾಡಿನ ಪೆರಂಬೂರಿನಲ್ಲಿ ಜನಿಸಿದ ಶಿವನಾಥನ್ ಹಾಗೂ ಕಾರ್ತಿಕೇಯನ್ ಅವರಿಗೆ 2014 ಹಾಗೂ 2017ರಲ್ಲಿ ಬೋವಿ ಜನಾಂಗದ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದ ಬಗ್ಗೆ ದಲಿತ ನಾಯಕ ಅಶೋಕ್ ಕೊಂಚಾಡಿ ಈ ಹಿಂದಿನ ಸಭೆಯಲ್ಲಿ ದೂರು ನೀಡಿದ್ದರ ಕುರಿತಂತೆ ಸಭೆಯಲ್ಲಿ ಇಂದು ಚರ್ಚೆ ನಡೆಯಿತು.

ಹೊರ ಜಿಲ್ಲೆಯಿಂದ ಬಂದ ಅವರು ಜಾತಿ ಪ್ರಮಾಣ ಪತ್ರ ಪಡೆದಿರುವುದಲ್ಲದೆ, ಸರಕಾರಿ ಇಲಾಖೆಗಳಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಇಂದಿನ ಸಭೆಯಲ್ಲಿ ದಲಿತ ನಾಯಕರಿಂದ ಆಕ್ಷೇಪ ವ್ಯಕ್ತವಾಯಿತು.

ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವಿಚಾರಣೆ ನಡೆದಿದ್ದು, ಸುಳ್ಳು ಪ್ರಮಾಣ ಪತ್ರ ಪಡೆದಿರುವುದಾಗಿ ಸಾಬೀತಾಗಿದೆ ಎಂದು ತಿಳಿಸಿದ ಡಾ. ಸಂತೋಷ್ ಕುಮಾರ್, ಈ ಬಗ್ಗೆ ಸ್ಥಳೀಯ ಡಿಸಿಪಿಗೆ ಪತ್ರ ಬರೆದು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

*ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಮನಪಾ ನಿರ್ಲಕ್ಷ: ಆರೋಪ

ನಗರದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ 94 ಲಕ್ಷ ರೂ.ಗಳ ಟೆಂಡರ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ವೃತ್ತ ಮಾತ್ರ ನಿರ್ಮಾಣವಾಗುತ್ತಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ನಿರ್ಲಕ್ಷ ವಹಿಸುತ್ತಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು.

ಮಹಾಕಾಳಿಪಡ್ಪು ಬಳಿ ಪೌರ ಕಾರ್ಮಿಕರಿಗೆ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಚಯ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪದ ಜತೆಗೆ, ಇಲ್ಲಿ ದ್ವಿಚಕ್ರ ವಾಹನಕ್ಕೆ ಪಾರ್ಕಿಂಗ್ ಸೌಲಭ್ಯ ಹಾಗೂ ವಸತಿ ಸಮುಚ್ಚಯಕ್ಕೆ ಆವರಣ ಗೋಡೆ ನಿರ್ಮಿಸಿ ಭದ್ರತೆ ಒದಗಿಸಬೇಕು ಎಂದು ದಲಿತ ಮುಖಂಡ ಆನಂದ್ ಒತ್ತಾಯಿಸಿದರು.

*ಎರಡೆರಡು ಹಕ್ಕುಪತ್ರ- ರದ್ದತಿಗೆ ಒತ್ತಾಯ

ಮುಲ್ಕಿಯ ಕಾರ್ನಾಡು ಗ್ರಾಮದ ಅಮೃತಮಯಿ ನಗರದಲ್ಲಿ 18 ವರ್ಷಗಳ ಹಿಂದೆ 76 ಮನೆಗಳಗೆ ಹಕ್ಕುಪತ್ರ ನೀಡಲಾಗಿದೆ. ಇದೀಗ ಅಲ್ಲಿ 134 ಕುಟುಂಬಗಳು ಹಕ್ಕುಪತ್ರ ಪಡೆದುಕೊಂಡಿವೆ. ಕೆಲವರು ಪತ್ನಿ ಹಾಗೂ ಪತಿಯ ಹೆಸರಿನಲ್ಲಿ ಸೇರಿದಂತೆ ಎರಡೆರಡು ಹಕ್ಕುಪತ್ರಗಳನ್ನು ಪಡೆದಿದ್ದಾರೆ. ಈ ಬಗ್ಗೆ ಕಳೆದ ಐದು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಪರಿಶೀಲನೆ ನಡೆಸಿ ಎರಡೆರಡು ಹಕ್ಕು ಪತ್ರ ಹೊಂದಿರುವುದನ್ನು ರದ್ದುಪಡಿಸಿ, ಅರ್ಹರಿಗೆ ಮನೆ ಇಲ್ಲದವರಿಗೆ ಅದನ್ನು ಒದಗಿಸಬೇಕು ಎಂದು ಆನಂದ್ ಒತ್ತಾಯಿಸಿದರು.

ದಲಿತ ನಾಯಕ ದೇವದಾಸ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ದಲಿತ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನದ ಕುರಿತಂತೆ ಸೂಕ್ತ ಮಾಹಿತಿ ಒದಗಿಸಬೇಕು. ದಲಿತರು ಉಪ ಜಾತಿಯೊಳಗೆ ವಿವಾಹವಾದಲ್ಲಿ 2 ಲಕ್ಷ ರೂ. ಪ್ರೋತ್ಸಾಹಧನವನ್ನು ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿದೆ. ವಿಧವೆಯರ ಮರು ವಿವಾಹಕ್ಕೆ 3 ಲಕ್ಷ ರೂ. ಹಾಗೂ ಸರಳ ರೀತಿಯಲ್ಲಿ ವಿವಾಹ ಆಗುವವರಿಗೆ ಪ್ರೋತ್ಸಾಹ ಧನವನ್ನು ಸರಕಾರದಿಂದ ನೀಡಲಾಗುತ್ತಿದೆ. ಈ ಬಗ್ಗೆ ಪ್ರಚಾರದ ಕೊರತೆ ಇದೆ ಎಂದು ಸಭೆಯ ಗಮನ ಸೆಳೆದರು.

ಜನನ- ಮರಣ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ

ತಾಲೂಕು ಕಚೇರಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ. ಮರಣ ಪ್ರಮಾಣ ಪತ್ರ ಪಡೆಯಲು ಒಂದೆರಡು ವರ್ಷ ಅಲೆದಾಡುವ ಪರಿಸ್ಥಿತಿ ಇದೆ ಎಂದು ದಲಿತ ನಾಯಕರೊಬ್ಬರು ನಿರ್ದಿಷ್ಟ ಪ್ರಕರಣಗಳನ್ನು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸಂತೋಷ್ ಕುಮಾರ್, ಸಕಾಲದಲ್ಲಿ ಮರಣ ಅಥವಾ ಜನನ ಪ್ರಮಾಣ ಪತ್ರ 21 ದಿನಗಳ ಒಳಗಾಗಿ ನೀಡಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ತೊಂದರೆ ಆಗಿರುವ ತೊಂದರೆ ಬಗ್ಗೆ ವಿಷಾದಿಸುವುದಾಗಿ ಹೇಳಿದರಲ್ಲದೆ, ನಿಗದಿತ ಅವಧಿಯೊಳಗೆ ಮರಣ ಹಾಗೂ ಜನನ ಪ್ರಮಾಣ ಪತ್ರ ಒದಗಿಸಲು ಸಿಬ್ಬಂದಿಗೆ ನಿರ್ದೇಶನ ಒದಗಿಸುವುದಾಗಿ ಭರವಸೆ ನೀಡಿದರು.

ಬಿಕರ್ನಕಟ್ಟೆಯ ಕೊರಗ ಕುಟುಂಬಗಳಿಗೆ ತಕ್ಷಣ ಪರ್ಯಾಯ ವ್ಯವಸ್ಥೆ

ಬಿಕರ್ನಕಟ್ಟೆಯಲ್ಲಿ 60 ವರ್ಷಗಳಿಂದ ಎರಡು ಕೊರಗ ಕುಟುಂಬಗಳು ಯಾವುದೇ ಸೌಲಭ್ಯ ಇಲ್ಲದೆ ವಾಸಿಸುತ್ತಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿದ್ದವು. ಆದರೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಆಗಿಲ್ಲ ಎಂದು ದಲಿತ ನಾಯಕ ರಘು ಎಕ್ಕಾರು ಅಸಮಾಧಾನ ವ್ಯಕ್ತಪಡಿಸಿದರು.

ಆ ಕುಟುಂಬಗಳಿಗೆ ಬಂದರು ಮತ್ತು ಕುಲಶೇಖರದಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಆದರೆ ಕುಟುಂಬಗಳು ಆ ಬಗ್ಗೆ ಆಸಕ್ತಿ ತೋರಿಸಿಲ್ಲ. ನಾಯಕರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಲ್ಲಿ, ತಕ್ಷಣವೇ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಡಾ.ಸಂತೋಷ್ ಕುಮಾರ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News