​ಬಂಟ್ವಾಳ: ನಿವೃತ್ತ ಬ್ಯಾಂಕ್ ಉದ್ಯೋಗಿಯ ಮನೆಗೆ ನುಗ್ಗಿ ದರೋಡೆ

Update: 2018-08-09 05:45 GMT

ಬಂಟ್ವಾಳ, ಆ. 9: ಬಾಗಿಲು ಬಡಿದ ಸದ್ದು ಕೇಳಿ ಮನೆಯ ಮಾಲಕ ಬಾಗಿಲು ತೆರೆದ ವೇಳೆ ಮಾರಕಾಯುಧಗಳಿಂದ ಹಲ್ಲೆಗೈದ ದುಷ್ಕರ್ಮಿಗಳು ಸುಲಿಗೆ ಮಾಡಿ, ಆತಂಕ ಸೃಷ್ಟಿಸಿದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ‌ಮೊಡಂಕಾಪು ನಿವಾಸಿ,  ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ ಹಲ್ಲೆ  ಹಾಗೂ ಸುಲಿಗೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಡೆದದ್ದೇನು ?

ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ ಮೊಡಂಕಾಪು ಕಾಲೇಜು ಬಳಿ ಇರುವ ತನ್ನ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದು, ಬುಧವಾರ ರಾತ್ರಿ ಕಾಲಿಂಗ್ ಬೆಲ್ ಸದ್ದಾಗಿದ್ದು, ತಮ್ಮ ಪುತ್ರ ಬಂದಿರಬಹುದು ಎಂದು ಹೊಳ್ಳ ಅವರು ಬಾಗಿಲು ತೆಗೆದ ಸಂದರ್ಭ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಹೊಳ್ಳ ಅವರ ತಲೆಗೆ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಮೂರು ಪವನ್ ಅಂದಾಜಿನ ಚಿನ್ನದ ಸರ ಕಿತ್ತು ಪರಾರಿಯಾಗಿದ್ದು, ಗಾಯಗೊಂಡ ಹೊಳ್ಳರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಎಸ್.ಐ. ಚಂದ್ರಶೇಖರ್, ಅಪರಾಧ ವಿಭಾಗ ಎಸ್.ಐ. ಹರೀಶ್, ಗ್ರಾಮಾಂತರ ಠಾಣೆ ಎಸ್.ಐ. ಪ್ರಸನ್ನ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News