ಸಮಾನತೆ ಇಸ್ಲಾಂನ ಮೂಲ ಸಂದೇಶವಾಗಿದೆ: ಮೌಲಾನ ಮಹಮೂದ್ ಮದನಿ

Update: 2018-08-09 09:21 GMT

ಮಂಗಳೂರು, ಆ. 9: ಸಮಾನತೆ ಮತ್ತು ಮಾನವೀಯತೆ ಇಸ್ಲಾಂನ ಮೂಲ ಸಂದೇಶವಾಗಿದೆ. ಆದುದರಿಂದ ಇಸ್ಲಾಂ ಸಮಸ್ತ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಸಂದೇಶವನ್ನು ಹೊಂದಿದೆ ಎಂದು ಮಾಜಿ ರಾಜ್ಯ ಸಭಾ ಸದಸ್ಯ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಜಮೀಯತ್ -ಇ- ಉಲಮಾ-ಇ-ಹಿಂದ್‌ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ತಿಳಿಸಿದ್ದಾರೆ.

ಯೆನೆಪೊಯ ಡೀಮ್ಡ್ ವಿಶ್ವ ವಿದ್ಯಾನಿಲಯದ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲುದ್ದೇಶಿಸಿರುವ ಅಪ್ಲೈಡ್ ಇಸ್ಲಾಮಿಕ್ಸ್ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸನ್ನು ಅವರು ಇಂದು ಕಾಲೇಜು ಆವರಣದ ಎನ್‌ಡ್ಯುರೆನ್ಸ್ ಜೋನ್‌ನಲ್ಲಿ ಉದ್ಘಾಟಿಸಿ, ಮಾತನಾಡುತಿದ್ದರು.

ಇಸ್ಲಾಂನ ಅಧ್ಯಯನ ಮತ್ತು ಸಂದೇಶಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಸ್ತ ಮನುಕುಲಕ್ಕೆ ಒಳಿತಾಗುತ್ತದೆ. ಇಸ್ಲಾಂ ಉತ್ತಮ ಸಮಾಜ ನಿರ್ಮಾಣದ ಸಂದೇಶಗಳನ್ನು ಒಳಗೊಂಡಿದೆ. ಉದಾಹರಣೆಗೆ ಇಸ್ಲಾಮಿನ ಪ್ರಕಾರ ಝಕಾತ್ ಸಮಾಜದಲ್ಲಿ ಆರ್ಥಿಕ ಅಸಮತೋಲನವನ್ನು ನೀಗಿಸಲು ಸಹಕಾರಿಯಾಗಿದೆ. ಉಳ್ಳವರು ಇಲ್ಲದವರಿಗೆ ನೀಡುವ ಮೂಲಕ ಸಮಾನತೆಯ ಸಂದೇಶವನ್ನು ಸಾರುತ್ತದೆ. ಇದೇ ರೀತಿ ಜಗತ್ತಿಗೆ ಮಾರ್ಗದರ್ಶನ ನೀಡುವ ಸಂದೇಶವನ್ನು ಇಸ್ಲಾಂ ಒಳಗೊಂಡಿದೆ. ವಿಜ್ಞಾನ, ಆರೋಗ್ಯ ವಿಜ್ಞಾನ, ಸಾಮಾಜಿಕ ವಿಜ್ಞಾನವನ್ನು ಮತ್ತು ಆಧುನಿಕ ಶಿಕ್ಷಣ ಮತ್ತು ಜ್ಞಾನ ವಿಸ್ತರಣಾ ಕ್ಷೇತ್ರದಲ್ಲಿ ಇಸ್ಲಾಮಿಕ್ ಚಿಂತನೆ ಅಳವಡಿಸುವ ದೃಷ್ಟಿಯಿಂದ ಈ ರೀತಿಯ ಅಧ್ಯಯನ ವಿಭಾಗವನ್ನು ಯೆನೆಪೊಯ ವಿಶ್ವ ವಿದ್ಯಾನಿಲಯದಲ್ಲಿ ಆರಂಭಿಸಿರುವುದು ಶ್ಲಾಘನೀಯ ಎಂದು ಮದನಿ ತಿಳಿಸಿದರು.

ಸಂವಿಧಾನದ ಮೂಲಭೂತ ಹಕ್ಕಿನ ಆಶಯವನ್ನು ಪ್ರತಿಬಿಂಬಿಸುವ ಇಸ್ಲಾಂನ ಸಂದೇಶಗಳು:- ಇಸ್ಲಾಂನ ಹಲವು ಸಂದೇಶಗಳು ಸಂವಿಧಾನದ ಮೂಲಭೂತ ಹಕ್ಕುಗಳ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸರಕಾರದ ಅಲ್ಪ ಸಂಖ್ಯಾತರ ವ್ಯವಹಾರ ಖಾತೆಗಳ ಮಾಜಿ ಸಚಿವ ಡಾ.ಕೆ. ರಹ್ಮಾನ್ ಖಾನ್ ತಿಳಿಸಿದ್ದಾರೆ.

ಸಮಾನತೆಯ ಹಾಗೂ ಆತನ ಆದಾಯದಲ್ಲಿ ನಿರ್ದಿಷ್ಟ ಭಾಗವನ್ನು ಇತರರಿಗೆ ಕಡ್ಡಾಯವಾಗಿ ನೀಡಬೇಕೆಂಬ ನಿಯಮವನ್ನು ಇಸ್ಲಾಂ ಹೊಂದಿದೆ. ಸಂವಿಧಾನವೂ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಇಸ್ಲಾಂ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ನೀಡಿದೆ. ಜಗತ್ತಿನಲ್ಲಿ ಇಸ್ಲಾಂನ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಮೂಡಲು ಇಸ್ಲಾಂನ ಸಂದೇಶವನ್ನು ತಪ್ಪಾಗಿ ಅರ್ಥೈಯಿಸಿಕೊಂಡಿರುವುದು ಕಾರಣವಾಗಿದೆ. ಇಸ್ಲಾಂನ ನೈಜ ತತ್ವಗಳನ್ನು ಇಂದಿನ ಯುವ ಜನತೆಗೆ ಮನವರಿಕೆ ಮಾಡುವ ಹೊಣೆಗಾರಿಕೆ ಹಿರಿಯರ ಮೇಲಿದೆ ಎಂದು ರಹ್ಮಾನ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮಾತನಾಡುತ್ತಾ, ಯೆನೆಪೊಯ ವಿಶ್ವ ವಿದ್ಯಾನಿಲಯದ ಮೂಲಕ ವಿಶ್ವದಲ್ಲಯೇ ವಿಶಿಷ್ಟವಾದ ಈ ಕೋರ್ಸ್ ನ್ನು ಆರಂಭಿಸಲಾಗುತ್ತದೆ. ಆಧುನಿಕ ವೈಜ್ಞಾನಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಸಂದರ್ಭದಲ್ಲಿ ಇಸ್ಲಾಮಿಕ್ ತತ್ವಗಳ ಹಿನ್ನೆಲೆಯಲ್ಲಿ ವಿವಿಧ ಜ್ಞಾನ ಕ್ಷೇತ್ರಗಳ ಅಧ್ಯಯನವನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ವಿಶ್ವಗುಣಮಟ್ಟದ ಇಸ್ಲಾಮಿಕ್ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

ವಿಜಯಪುರದ ಅಲ್‌ಅಮೀನ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಝಿಯಾವುಲ್ಲಾ ಶರೀಫ್ ಗೌರವ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಯೆನೆಪೊಯ ವಿ.ವಿ ಇಸ್ಲಾಮಿಕ್ ಅಧ್ಯಯನ ಹಾಗೂ ಸಂಶೊಧನಾ ಪೀಠದ ಮುಖ್ಯಸ್ಥ ಡಾ. ಜಾವಿದ್ ಜಮೀಲ್ ವಿಶೇಷ ಪಿ.ಜಿ ಡಿಪ್ಲೊಮಾ ಕೋರ್ಸ್‌ನ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ, ವಿಶ್ವವಿದ್ಯಾನಿಲಯದ ಸಲಹಾ ಸಮಿತಿಯ ಸದಸ್ಯರಾದ ಡಾ. ಹಬೀಬ್ ರಹ್ಮಾನ್, ಪ್ರೊ. ಅಬ್ದುಲ್ ರಹ್ಮಾನ್, ಡಾ. ಎಂ. ಮುಷ್ತಾಕ್, ಅತಾಅತ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

ಯೆನೆಪೊಯ ವಿವಿ ಉಪ ಕುಲಪತಿ ಡಾ.ಎಂ.ವಿಜಯಕುಮಾರ್ ಸ್ವಾಗತಿಸಿದರು. ಕುಲಸಚಿವ ಡಾ.ಜಿ. ಶ್ರೀಕುಮಾರ್ ಮೆನನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News