ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪಡುಬಿದ್ರೆಯ ಇಬ್ಬರು ಹಿಂಜಾವೇ ಕಾರ್ಯಕರ್ತರು ಎಸ್‌ಐಟಿ ವಶಕ್ಕೆ

Update: 2018-08-09 15:12 GMT

ಉಡುಪಿ, ಆ.9: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆಯ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಿಬ್ಬರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖಾಧಿಕಾರಿಗಳು ಗುರುವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಪಡುಬಿದ್ರೆ ಸಮೀಪದ ಪಾದೆಬೆಟ್ಟು ನಿವಾಸಿ ಸಂದೇಶ್ ಶೆಟ್ಟಿ(28) ಹಾಗೂ ಕಂಚಿನಡ್ಕದ ಯುವರಾಜ್ ಕುಲಾಲ್(30) ಎಂಬವರನ್ನು ವಶಕ್ಕೆ ತೆಗೆದು ಕೊಂಡಿರುವ ಎಸ್‌ಐಟಿ ತನಿಖಾ ತಂಡ, ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದೆ. ಇದನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ದೃಢಪಡಿಸಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪದಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರಿನಿಂದ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿಗಳ ತಂಡವು ಸ್ಥಳೀಯ ಪಡುಬಿದ್ರೆ ಪೊಲೀಸರ ಸಹಕಾರದೊಂದಿಗೆ ಇಬ್ಬರನ್ನು ಅವರ ಮನೆಯಿಂದ ವಶಕ್ಕೆ ಪೆದು ಕೊಂಡಿದೆ ಎಂದು ತಿಳಿದು ಬಂದಿದೆ.

ಯುವರಾಜ್ ಕುಲಾಲ್ ಹಿಂದೂ ಜಾಗರಣಾ ವೇದಿಕೆಯ ಕಾಪು ತಾಲೂಕು ಕಾರ್ಯದರ್ಶಿಯಾಗಿದ್ದು, ಪಡುಬಿದ್ರೆಯಲ್ಲಿ ಸ್ವಂತ ಭಗವತಿ ಕನಸ್ಟ್ರಕ್ಷನ್ ಹೆಸರಿ ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾನೆ. ಅಲ್ಲದೆ ಚಾಲಕ ವೃತ್ತಿ ಕೂಡ ಮಾಡುತ್ತಿದ್ದಾನೆ. ಮೂಲತಃ ಬೆಳ್ತಂಗಡಿ ನಿವಾಸಿಯಾಗಿರುವ ಕುಲಾಲ್ ಕುಟುಂಬ, 10 ವರ್ಷಗಳ ಹಿಂದೆ ಕಂಚಿನಡ್ಕಕ್ಕೆ ಬಂದು ನೆಲೆಸಿದೆ. ಕುಲಾಲ್‌ಗೆ ತಂದೆ, ತಾಯಿ ಹಾಗೂ ಓರ್ವ ಸಹೋದರಿ ಇದ್ದಾರೆ.

ಕಾಪು ಕ್ಷೇತ್ರದ ಗೋ ಪ್ರಕೋಸ್ಟಾದಲ್ಲಿ ಸಹ ಸಂಚಾಲಕನಾಗಿದ್ದ ಸಂದೇಶ್ ಶೆಟ್ಟಿ, ಕೆಲವು ಸಮಯಗಳ ಹಿಂದೆ ನಡೆದ ಮುದರಂಗಡಿ ಮಸೀದಿಗೆ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಪಾದೆಬೆಟ್ಟುವಿನಲ್ಲಿರುವ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಶೆಟ್ಟಿಗೆ ತಂದೆ ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News