ನಿಮ್ಮ ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಇಪಿಎಫ್ ಬ್ಯಾಲನ್ಸ್ ನೋಡುವುದು ಹೇಗೆ...?

Update: 2018-08-09 11:26 GMT

ನೀವು ವೇತನದಾರರಾಗಿದ್ದರೆ ಮತ್ತು ನೌಕರರ ಭವಿಷ್ಯ ನಿಧಿ(ಇಪಿಎಫ್)ಗೆ ವಂತಿಗೆಯನ್ನು ಸಲ್ಲಿಸುತ್ತಿದ್ದರೆ ನಿಮ್ಮ ಖಾತೆಯಲ್ಲಿನ ಶಿಲ್ಕನ್ನು ಪರಿಶೀಲಿಸುವುದು ಸುಲಭವಾಗಿದೆ. ಇದಕ್ಕಾಗಿ ನಿಮಗೆ ಅಗತ್ಯವಾಗಿರುವುದು ಮೊಬೈಲ್ ಫೋನ್,ಮೊಬೈಲ್ ನಂಬರ್ ಮತ್ತು ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಮಾತ್ರ. ಇಪಿಎಫ್ ಬ್ಯಾಲನ್ಸ್‌ನ್ನು ತಿಳಿದುಕೊಳ್ಳಲು ನಿಮ್ಮ ಉದ್ಯೋಗದಾತ ಸಂಸ್ಥೆಯು ವರ್ಷದ ಕೊನೆಯಲ್ಲಿ ಇಪಿಎಫ್ ಸ್ಟೇಟ್‌ಮೆಂಟ್‌ನ್ನು ನೀಡುವವರೆಗೆ ಈಗ ಕಾಯಬೇಕಿಲ್ಲ.

ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಇಪಿಎಫ್ ಬ್ಯಾಲನ್ಸ್‌ನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಇಪಿಎಫ್ ಉದ್ಯೋಗಿಯ ಉಳಿತಾಯದ ಅಖಂಡ ಭಾಗವಾಗಿದೆ. ಪ್ರತಿ ತಿಂಗಳು ನಿಮ್ಮ ಮೂಲವೇತನದ ಶೇ.12 ಮತ್ತು ಅಷ್ಟೇ ಪ್ರಮಾಣದಲ್ಲಿ ಉದ್ಯೋಗದಾತರ ವಂತಿಗೆ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತಿರುತ್ತದೆ. ಹೀಗಾಗಿ ನಿಮ್ಮ ಈ ಉಳಿತಾಯದ ಮೇಲೆ ನಿಗಾಯಿರಿಸುವುದು ಒಳ್ಳೆಯದು. ಸುದೈವವಶಾತ್ ಈಗ ಇಪಿಎಫ್ ಬ್ಯಾಲನ್ಸ್‌ನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲೂ ಪರಿಶೀಲಿಸಬಹುದು. ಇದಕ್ಕಾಗಿ ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ ಅಥವಾ ಇಪಿಎಫ್ ಕಚೇರಿಗೆ ಅಲೆದಾಡಬೇಕಿಲ್ಲ.

ಇಪಿಎಫ್ ಬ್ಯಾಲನ್ಸ್ ತಿಳಿದುಕೊಳ್ಳಲು ಹಲವಾರು ಮಾರ್ಗಗಳಿವೆ. ಇದಕ್ಕೆ ಕ್ರಿಯಾಶೀಲವಾಗಿರುವ ಯುಎಎನ್ ಮತ್ತು ಆಧಾರ್ ಸಂಖ್ಯೆಯ ಮೂಲಕ ದೃಢೀಕರಣ ಇವಿಷ್ಟು ಸಾಕು.

► ಮಿಸ್ಡ್ ಕಾಲ್ ಮೂಲಕ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ 011-22901406ಕ್ಕೆ ಮಿಸ್ಡ್ ಕಾಲ್ ನೀಡುವುದು ಇಪಿಎಫ್ ಬ್ಯಾಲನ್ಸ್ ತಿಳಿದುಕೊಳ್ಳಲು ಅತ್ಯಂತ ಸುಲಭದ ವಿಧಾನವಾಗಿದೆ. ಆದರೆ ನೀವು ಯುಎಎನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಮತ್ತು ಯುಎಎನ್ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ,ಆಧಾರ್ ಸಂಖ್ಯೆ ಮತ್ತು ಪಾನ್ ಕಾರ್ಡ್‌ನೊಂದಿಗೆ ಜೋಡಣೆಯಾಗಿರುವಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ. ಮಿಸ್ಡ್ ಕಾಲ್ ರವಾನಿಸಿದ ಬಳಿಕ ನಿಮ್ಮ ಪಿಎಫ್ ಸಂಖ್ಯೆ,ಹೆಸರು,ಜನ್ಮದಿನಾಂಕ,ನಿಮ್ಮ ಖಾತೆಯಲ್ಲಿರುವ ಇಪಿಎಫ್ ಬ್ಯಾಲನ್ಸ್ ಮತ್ತು ನಿಮ್ಮ ಕೊನೆಯ ವಂತಿಗೆಯ ವಿವರಗಳನ್ನೊಳಗೊಂಡ ಎಸ್‌ಎಂಎಸ್ ನಿಮ್ಮ ಮೊಬೈಲ್‌ಗೆ ಬರುತ್ತದೆ.

► ಎಸ್‌ಎಂಎಸ್ ಕಳುಹಿಸುವ ಮೂಲಕ

ನೀವು 7738299899 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿದರೆ ನಿಮ್ಮ ವಂತಿಗೆ ವಿವರ ಮತ್ತು ಇಪಿಎಫ್ ಬ್ಯಾಲನ್ಸ್ ಅನ್ನು ನಿಮ್ಮ ಫೋನ್‌ಗೆ ರವಾನಿಸಲಾಗುತ್ತದೆ. ‘ಇಪಿಎಫ್‌ಒಎಚ್‌ಒ ಯುಎಎನ್ ಇಎನ್‌ಜಿ’ಎಂದು ದಪ್ಪಕ್ಷರಗಳಲ್ಲಿ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ. ಇಲ್ಲಿ ‘ಇಎನ್‌ಜಿ’ ನಿಮಗೆ ಯಾವ ಭಾಷೆಯಲ್ಲಿ ಸಂದೇಶ ಬೇಕಾಗಿದೆಯೋ ಅದರ ಮೊದಲ ಮೂರು ಅಕ್ಷರಗಳನ್ನು ಸೂಚಿಸುತ್ತದೆ. ಸಂದೇಶ ಸೌಲಭ್ಯವು ಇಂಗ್ಲಿಷ್, ಹಿಂದಿ, ಕನ್ನಡ, ಪಂಜಾಬಿ, ಗುಜರಾತಿ,ಮರಾಠಿ,ತೆಲುಗು,ತಮಿಳು,ಮಲಯಾಳಂ ಮತ್ತು ಬೆಂಗಾಳಿ ಭಾಷೆಗಳಲ್ಲಿ ಲಭ್ಯವಿದೆ. ನಿಮ್ಮ ಇಪಿಎಫ್ ಬ್ಯಾಲನ್ಸ್ ಒಳಗೊಂಡಿರುವ ಸಂದೇಶವು ಬರಬೇಕಿದ್ದರೆ ನೀವು ಕ್ರಿಯಾಶೀಲ ಯುಎಎನ್ ಹೊಂದಿರಬೇಕು ಮತ್ತು ಅದು ಬ್ಯಾಂಕ್ ಖಾತೆ,ಆಧಾರ್ ಮತ್ತು ಪಾನ್ ಕಾರ್ಡ್‌ಗೆ ಜೋಡಣೆಯಾಗಿರಬೇಕು.

► ಉಮಂಗ್ ಆ್ಯಪ್ ಮೂಲಕ

ಯುನೈಟೆಡ್ ಮೊಬೈಲ್ ಅಪ್ಲಿಕೇಷನ್ ಫಾರ್ ನ್ಯೂ-ಏಜ್ ಗವರ್ನನ್ಸ್ ಅಥವಾ ಉಮಂಗ್ ಭಾರತ ಸರಕಾರದ ಉಪಕ್ರಮಗಳ ಮೂಲಕ ಅಭಿವೃದ್ಧಿಗೊಳಿಸಲಾಗಿರುವ ಆ್ಯಪ್ ಆಗಿದೆ. ಇತರ ಹಲವಾರು ಸೇವೆಗಳನ್ನು ಪಡೆಯುವ ಜೊತೆಗೆ ಉದ್ಯೋಗಿಗಳು ಈ ಆ್ಯಪ್‌ನ ನೆರವಿನಿಂದ ತಮ್ಮ ಇಪಿಎಫ್ ಬ್ಯಾಲನ್ಸ್‌ನ್ನೂ ಪರಿಶೀಲಿಸಿಬಹುದು. ಇದಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಬಳಸಿ ಒಂದು ಬಾರಿಯ ನೋಂದಣಿಯನ್ನು ಪೂರ್ಣಗೊಳಿಸುವುದು ಅಗತ್ಯವಾಗುತ್ತದೆ. ಈ ಆ್ಯಪ್ ಬಳಸಿ ನಿಮ್ಮ ಇಪಿಎಫ್ ಪಾಸ್‌ಬುಕ್‌ನ್ನು ವೀಕ್ಷಿಸಬಹುದು,ಹಕ್ಕು ಅಥವಾ ಆಕ್ಷೇಪವನ್ನು ಸಲ್ಲಿಸಬಹುದು ಮತ್ತು ಅದರ ಜಾಡನ್ನೂ ಕಂಡುಕೊಳ್ಳಬಹುದು.

► ಇಪಿಎಫ್‌ಒ ಆ್ಯಪ್‌ನ ಬಳಕೆ

 ಪಿಪಿಎಫ್ ಬ್ಯಾಲನ್ಸ್ ಪರಿಶೀಲಿಸಲು ಎಂ-ಇಪಿಎಫ್ ಎಂಬ ಇಪಿಎಫ್‌ಒ ಆ್ಯಪ್‌ನ್ನು ನಿಮ್ಮ ಮೊಬೈಲ್‌ಗೆ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಿ. ಇಂದು ಇಪಿಎಫ್ ಬ್ಯಾಲನ್ಸನ್ನು ಪರಿಶೀಲಿಸಲು ಹಲವಾರು ಆ್ಯಪ್‌ಗಳು ಲಭ್ಯವಿವೆ. ಆ್ಯಪ್‌ನ್ನು ತೆರೆದು ‘ಮೆಂಬರ್’ನ್ನು ಕ್ಲಿಕ್ ಮಾಡಿ,ಬಳಿಕ ‘ಬ್ಯಾಲನ್ಸ್/ಪಾಸ್‌ಬುಕ್’ ಅನ್ನು ಕ್ಲಿಕ್ ಮಾಡಿ. ಬ್ಯಾಲನ್ಸ್‌ನ್ನು ಪಡೆಯಲು ನೀವು ನಿಮ್ಮ ಯುಎಎನ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಆದರೆ ಈ ಆ್ಯಪ್ ಸರಳವಾಗಿರುವುದರಿಂದ ಇದರ ಮೂಲಕ ಇಪಿಎಫ್ ವರ್ಗಾವಣೆ ಮತ್ತು ಹಿಂದೆಗೆತ ನಿರ್ಬಂಧಕ್ಕೊಳಪಟ್ಟಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News