ಸಂಥಲಿ ಭಾಷೆಯ ವಿಕಿಪೀಡಿಯಾ ಆವೃತ್ತಿ ಆರಂಭ

Update: 2018-08-09 15:35 GMT

ಕೋಲ್ಕತಾ, ಆ.9: ಸಂಥಲಿ ಭಾಷೆಯು ಸ್ವಂತ ಲಿಪಿಯ ಮೂಲಕ ವಿಕಿಪೀಡಿಯಾ ಆವೃತ್ತಿ ಆರಂಭಿಸಿದ ಭಾರತದ ಪ್ರಪ್ರಥಮ ಬುಡಕಟ್ಟು ಭಾಷೆಯಾಗಿ ಮಾನ್ಯತೆ ಪಡೆದಿದೆ. ಸಂಥಲಿ ವಿಕಿಪೀಡಿಯಾವು ಜೂನ್ 28ರಂದು ವಿಕಿಮೀಡಿಯಾ ಪ್ರತಿಷ್ಠಾನದ ಭಾಷಾ ಸಮಿತಿಯ ಅನುಮೋದನೆ ಪಡೆಯಿತು ಮತ್ತು ಆಗಸ್ಟ್ 2ರಿಂದ ಕಾರ್ಯಾರಂಭ ಮಾಡಿದೆ.

ಭಾರತ, ಬಾಂಗ್ಲಾದೇಶ ಹಾಗೂ ನೇಪಾಳದ ವಿಕಿಪೀಡಿಯಾ ಬಳಕೆದಾರರ ನೆರವಿನಿಂದ ಇದು ಸಾಧ್ಯವಾಗಿದೆ . ಈಗ ಸಂಥಲಿ ಆವೃತ್ತಿಯಲ್ಲಿ ಸುಮಾರು 70,000 ಪರಿವಿಡಿಗಳಿವೆ ಎಂದು ವಿಕಿಮೀಡಿಯಾ ಪ್ರತಿಷ್ಠಾನದ ಭಾರತ ವಿಭಾಗದ ಅಧಿಕಾರಿ ಜಯಂತ ನಾಥ್ ತಿಳಿಸಿದ್ದಾರೆ. 2001ರ ಗಣತಿಯ ಪ್ರಕಾರ ಭಾರತದಲ್ಲಿಯೇ ಸುಮಾರು 6.4 ಮಿಲಿಯನ್ ಜನತೆ ಸಂಥಲಿ ಭಾಷೆ ಮಾತನಾಡುತ್ತಾರೆ. ಜಾರ್ಖಂಡ್, ಪ.ಬಂಗಾಲ, ಒಡಿಶಾ ಮತ್ತು ಅಸ್ಸಾಂಗಳಲ್ಲಿ ಹೆಚ್ಚಾಗಿ ಈ ಭಾಷೆ ಮಾತನಾಡುತ್ತಿದ್ದು ಬಾಂಗ್ಲಾದೇಶ ಹಾಗೂ ನೇಪಾಳದಲ್ಲೂ ಈ ಭಾಷೆ ಮಾತನಾಡುತ್ತಾರೆ. ಒಐ ಚಿಕಿ ಲಿಪಿಯಲ್ಲಿ ಸಂಥಾಲಿ ಭಾಷೆಯನ್ನು ಬರೆಯಲಾಗುತ್ತದೆ. 2017ರ ನವೆಂಬರ್‌ನಲ್ಲಿ ಸಂಥಲಿ ಭಾಷೆಯ ಪ್ರಥಮ ರೇಡಿಯೊ ಕಾರ್ಯಕ್ರಮ ಆರಂಭವಾಗಿದ್ದು ರೇಡಿಯೊ ಜಾಕಿ(ಆರ್‌ಜೆ)ಯಾಗಿದ್ದ 24ರ ಹರೆಯದ ಶಿಖಾ ಮಂಡಿ ಸಂಥಲಿ ಭಾಷೆಯ ಪ್ರಥಮ ಆರ್‌ಜೆ ಆಗಿ ರೇಡಿಯೊ ಮಿಲನ್ 90.4 ಎಫ್‌ಎಂನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದರು. ಪಶ್ಚಿಮಬಂಗಾಳದಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಪ್ರಥಮ ಬಾರಿಗೆ ನೂರಾರು ವಿದ್ಯಾರ್ಥಿಗಳು ಸಂಥಲಿ ಭಾಷೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಇದೇ ವರ್ಷದ ಮಾರ್ಚ್‌ನಲ್ಲಿ ಸಂಥಲಿ ಭಾಷೆಯ ಜಾಗತಿಕ ಸಮಾವೇಶ ಜಿನೆವಾದಲ್ಲಿ ನಡೆದಿದೆ. ಸಂಥಲಿ ಭಾಷೆಯ ವಿಕಿಪೀಡಿಯಾಕ್ಕೆ ಬರಹ, ಮಾಹಿತಿಗಳನ್ನು ಕಳುಹಿಸುವಂತೆ ಜನರನ್ನು ಪ್ರೋತ್ಸಾಹಿಸಲು ಶೀಘ್ರದಲ್ಲೇ ಭಾರತ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಾಂಗ್ಲಾದೇಶದ ಬುಡಕಟ್ಟು ಸಂಘಟನೆಯಾಗಿರುವ ‘ಜಾತೀಯ ಆದಿಬಾಸಿ ಪರಿಷದ್’ನ ಮಾಹಿತಿ ಮತ್ತು ಸಂಶೋಧನಾ ಕಾರ್ಯದರ್ಶಿ ಮಾಣಿಕ್ ಸೊರೇನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News