ಮೂಲ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಉಳಿಸಿಕೊಳ್ಳುವ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ

Update: 2018-08-09 15:37 GMT

ಹೊಸದಿಲ್ಲಿ, ಆ.9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಬಂಧನಕ್ಕೊಳಗಾಗುವ ಅಧಿಕಾರಿಗಳ ಹಿತರಕ್ಷಣೆಯ ದೃಷ್ಟಿಯಿಂದ ಸರ್ವೋಚ್ಚ ನ್ಯಾಯಾಲಯ ಸೂಚಿಸಿದ್ದ ಕೆಲವೊಂದು ಬದಲಾವಣೆಗಳನ್ನು ರದ್ದುಪಡಿಸುವ ನೂತನ ಮಸೂದೆಗೆ ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿದೆ.

ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಗೆ ಆಗಸ್ಟ್ 6ರಂದು ಲೋಕಸಭೆಯಲ್ಲಿ ಹಸಿರು ನಿಶಾನೆ ದೊರಕಿತ್ತು. ನೂತನ ಕಾಯ್ದೆಯ ಪ್ರಕಾರ, ಎಸ್ಸಿ/ಎಸ್ಟಿ ಕಾಯ್ದೆಯಡಿ ಆರೋಪಿತನಾಗಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡುವಂತಿಲ್ಲ. ಜೊತೆಗೆ ಈ ಕಾಯ್ದೆಯಡಿ, ಈ ಹಿಂದೆ ನ್ಯಾಯಾಲಯ ತಿಳಿಸಿದಂತೆ, ಆರೋಪಿಯ ವಿರುದ್ಧ ದೂರು ದಾಖಲಿಸಲು ಪ್ರಾಥಮಿಕ ತನಿಖೆಯ ಅಗತ್ಯವಿರುವುದಿಲ್ಲ ಮತ್ತು ಆತನ ಬಂಧನಕ್ಕೆ ಯಾರ ಅನುಮತಿಯನ್ನೂ ಪಡೆಯಬೇಕಾಗಿಲ್ಲ.

ಮಸೂದೆಯ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೊಟ್, ಈ ಮಸೂದೆಗೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೆಲ್ಮನೆಯ ಕೆಲವು ಸದಸ್ಯರು ಈ ಕಾಯ್ದೆಯಡಿ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ರಚಿಸುವ ಸಲಹೆ ನೀಡಿದ್ದಾರೆ. ಅದಕ್ಕಾಗಿ ಮಸೂದೆಯಲ್ಲಿ ಅವಕಾಶ ಮಾಡಲಾಗಿದೆ. 14 ರಾಜ್ಯಗಳು ಈಗಾಗಲೇ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣಗಳ ವಿಚಾರಣೆಗಾಗಿ 195 ವಿಶೇಷ ನ್ಯಾಯಾಲಯಗಳನ್ನು ರಚಿಸಿವೆ. ಕೆಲವೊಂದು ರಾಜ್ಯಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳನ್ನೇ ವಿಶೇಷ ನ್ಯಾಯಾಲಯಗಳೆಂದು ಘೋಷಿಸಿವೆ ಎಂದು ಗೆಹ್ಲೊಟ್ ತಿಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಮಾರ್ಚ್ 20ರಂದು ನೀಡಿದ ಆದೇಶದಲ್ಲಿ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಮತ್ತು ಅವರನ್ನು ಬಂಧಿಸಲು ಹಿರಿಯ ಅಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿತ್ತು. ನ್ಯಾಯಾಲಯದ ಈ ಆದೇಶದಿಂದ ಎಸ್ಸಿ/ಎಸ್ಟಿ ಕಾಯ್ದೆಯನ್ನು ಸಡಿಲಗೊಳಿಸಿದಂತಾಗಿದೆ ಎಂದು ಆರೋಪಿಸಿ ವಿಪಕ್ಷಗಳು ಹಾಗೂ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸದ್ಯ ಕೇಂದ್ರ ಸರಕಾರ ಈ ಆದೇಶವನ್ನು ರದ್ದುಗೊಳಿಸಿ ಹಿಂದಿನ ಕಾಯ್ದೆಯನ್ನೇ ಮುಂದುವರಿಸದೆ ಇದ್ದಲ್ಲಿ ದೇಶವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷಗಳು ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News