ಜೇಪಿ ಇನ್‌ಫ್ರಾಟೆಕ್‌ಗೆ ಬಿಡ್ ಸಲ್ಲಿಸಲು ಜೈಪ್ರಕಾಶ ಅಸೋಸಿಯೇಟ್ಸ್‌ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ,ಆ.9: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್‌ಟಿ)ಯಲ್ಲಿ ದಿವಾಳಿ ಕ್ರಮವನ್ನು ಎದುರಿಸುತ್ತಿರುವ ಜೇಪಿ ಇನ್‌ಫ್ರಾಟೆಕ್‌ಗಾಗಿ ಜೈಪ್ರಕಾಶ ಅಸೋಸಿಯೇಟ್ಸ್‌ನ ಪ್ರವರ್ತಕರು ಬಿಡ್ ಸಲ್ಲಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಿಳಿಸಿದೆ.
ಬಿಡ್ ಸಲ್ಲಿಕೆಗಾಗಿ ಅನುಮತಿ ಕೋರಿದ್ದ ಜೈಪ್ರಕಾಶ ಅಸೋಸಿಯೇಟ್ಸ್‌ನ ಅರ್ಜಿಯನ್ನು ತಿರಸ್ಕರಿಸಿದ ಮು.ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ತನ್ನ ಕಾರ್ಯವನ್ನು ಮುಂದುವರಿಸಲು ಎನ್‌ಸಿಎಲ್‌ಟಿಗೆ ಅನುಮತಿ ನೀಡಿತು.
ಯಾವುದೇ ಸ್ಥಿತಿಯನ್ನು ಎದುರಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಪೂರ್ಣಾಧಿಕಾರವನ್ನು ನೀಡುವ ಸಂವಿಧಾನದ 142ನೇ ವಿಧಿಯನ್ನು ಬಳಸಿಕೊಂಡ ಪೀಠವು,ದಿವಾಳಿತನ ಕ್ರಮಗಳನ್ನು ಪೂರ್ಣಗೊಳಿಸಲು 180 ದಿನಗಳ ಕಡ್ಡಾಯ ಅವಧಿಯು ಆ.9ರಿಂದ ಆರಂಭಗೊಳ್ಳುತ್ತದೆ ಎಂದು ತಿಳಿಸಿತು.ಮನೆ ಖರೀದಿದಾರರು ಸೇರಿದಂತೆ ಸಾಲಗಾರರ ನೂತನ ಸಮಿತಿಯೊಂದನ್ನು ರಚಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿತು.
ಜೈಪ್ರಕಾಶ ಅಸೋಸಿಯೇಟ್ಸ್ ಠೇವಣಿಯಿರಿಸಿರುವ 750 ಕೋ.ರೂ.ಗಳನ್ನು ಎನ್‌ಸಿಎಲ್‌ಟಿ ವರ್ಗಾಯಿಸುವಂತೆ ಆದೇಶಿಸಿದ ನ್ಯಾಯಾಲಯವು,ಜೈಪ್ರಕಾಶ ಅಸೋಸಿಯೇಟ್ಸ್ ವಿರುದ್ಧ ದಿವಾಳಿತನ ಕ್ರಮಗಳನ್ನು ಆರಂಭಿಸುವಂತೆ ಬ್ಯಾಂಕುಗಳಿಗೆ ಸೂಚಿಸಲು ಅನುಮತಿ ಕೋರಿ ಆರ್‌ಬಿಐ ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿತು.