ರಫೇಲ್ ವಿವಾದ:ಲೋಕಸಭೆ ಮೂರನೇ ಬಾರಿ ಮುಂದೂಡಿಕೆ

Update: 2018-08-09 15:42 GMT

ಹೊಸದಿಲ್ಲಿ,ಆ.9: ಗುರುವಾರ ಸದನದಲ್ಲಿ ರಫೇಲ್ ಯುದ್ಧವಿಮಾನಗಳ ಖರೀದಿ ವಿಷಯದಲ್ಲಿ ಕಾಂಗ್ರೆಸ್ ಸದಸ್ಯರ ಗಲಾಟೆಯಿಂದಾಗಿ ಮೂರನೇ ಬಾರಿ ಮುಂದೂಡಿಕೆಗೆ ಲೋಕಸಭೆಯು ಸಾಕ್ಷಿಯಾಯಿತು.

ಬೆಳಿಗ್ಗೆ ಪ್ರಶ್ನೆವೇಳೆಯಲ್ಲಿ ಟಿಆರ್‌ಎಸ್ ಸದಸ್ಯರು ತೆಲಂಗಾಣದಲ್ಲಿ ರಕ್ಷಣಾ ಇಲಾಖೆಯ ಭೂಮಿ ಹಂಚಿಕೆ ಕುರಿತು ಗದ್ದಲವೆಬ್ಬಿಸಿದ್ದರಿಂದ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಸದನವು ಮರುಸಮಾವೇಶಗೊಂಡಾಗ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಮತ್ತು ಫ್ರಾನ್ಸ್‌ನೊಂದಿಗೆ ರಫೇಲ್ ಒಪ್ಪಂದದ ಕುರಿತು ದೇಶವನ್ನು ದಾರಿ ತಪ್ಪಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಯುಪಿಎ ಸರಕಾರದಡಿ ಪ್ರತಿ ವಿಮಾನಕ್ಕೆ 626 ಕೋ.ರೂ.ಖರೀದಿ ಬೆಲೆಯಂತೆೆ ರಫೇಲ್ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು. ಆದರ ಈಗ ಅದನ್ನು ಮೂರು ಪಟ್ಟುಗಳಷ್ಟು ಹೆಚ್ಚಿಸಿ ಪ್ರತಿ ವಿಮಾನಕ್ಕೆ 1,600 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದೆ. ರಫೇಲ್ 45,000 ಕೋ.ರೂ.ಗಳ,ದೇಶದ ಅತ್ಯಂತ ದೊಡ್ಡ ಹಗರಣವಾಗಿದೆ ಎಂದ ಅವರು,ಒಪ್ಪಂದದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸುವಂತೆ ಆಗ್ರಹಿಸಿದರು.

ಖರ್ಗೆಯವರ ಹೇಳಿಕೆಯ ಬಳಿಕ ಕಾಂಗ್ರೆಸ ಸದಸ್ಯರು ‘ಸಂಸತ್ತು ಮತ್ತು ಜನತೆಯ ದಾರಿ ತಪ್ಪಿಸುವುದನ್ನು ನಿಲ್ಲಿಸಿ’ ಹಾಗೂ ‘ರಫೇಲ್ ಕುರಿತು ಜೆಪಿಸಿ ರಚಿಸಿ’ ಎಂದು ಬರೆಯಲಾಗಿದ್ದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಸ್ಪೀಕರ್ ಪೀಠದತ್ತ ಧಾವಿಸಿದರು, ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಪರಾಹ್ನ ಒಂದು ಗಂಟೆಯವರೆಗೆ 20 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

ಸದನವು ಮರುಸಮಾವೇಶಗೊಂಡಾಗ ಜಿಎಸ್‌ಟಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಸದನದಲ್ಲಿ ಮಂಡಿಸುವಂತೆ ಮಹಾಜನ ಅವರು ವಿತ್ತಸಚಿವ ಪಿಯೂಷ ಗೋಯಲ್ ಅವರಿಗೆ ಸೂಚಿಸಿದರು. ಗೋಯಲ್ ಅವರು ಮಸೂದೆಗಳನ್ನು ಮಂಡಿಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಮತ್ತೆ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರಿಂದ ಸದನವನ್ನು ಮತ್ತೊಮ್ಮೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News