ಜೊಕೊವಿಕ್, ನಡಾಲ್ ಮೂರನೇ ಸುತ್ತಿಗೆ ಲಗ್ಗೆ

Update: 2018-08-09 18:03 GMT

ಟೊರಾಂಟೊ, ಆ.9: ನಾಲ್ಕು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾಗೂ ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ರೋಜರ್ಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಬುಧವಾರ ಒಂದು ಗಂಟೆ, 25 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಅವರು ಕೆನಡಾದ ಪೀಟರ್ ಪೊಲ್ಯಾನ್‌ಸ್ಕಿ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ವಿಂಬಲ್ಡನ್ ಸೆಮಿ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ ಐದು ಸೆಟ್‌ಗಳಿಂದ ಸೋತ ಬಳಿಕ ಮೊದಲ ಪಂದ್ಯವನ್ನಾಡಿದ ನಡಾಲ್ ಮಳೆಬಾಧಿತ ಪಂದ್ಯದಲ್ಲಿ ಫ್ರಾನ್ಸ್ ನ ಬೆನೊಟ್ ಪೈರ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಮಾಜಿ ನಂ.1 ಆಟಗಾರ ಜೊಕೊವಿಕ್ ಈ ಟೂರ್ನಿಯಲ್ಲಿ 9ನೇ ಶ್ರೇಯಾಂಕ ಪಡೆದಿದ್ದು 2016ರಲ್ಲಿ ಕೊನೆಯ ಬಾರಿ ರೋಜರ್ಸ್ ಕಪ್ ಜಯಿಸಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಲಿದ್ದಾರೆ. ಸ್ಟೆಫನೊಸ್ ಆಸ್ಟ್ರೀಯದ ಏಳನೇ ಶ್ರೇಯಾಂಕದ ಡೊಮಿನಿಕ್ ಥೀಮ್‌ರನ್ನು 6-3, 7-6(6) ಸೆಟ್‌ಗಳಿಂದ ಸೋಲಿಸಿದ್ದಾರೆ.

ನಡಾಲ್ ಅವರು ಮುಂದಿನ ಸುತ್ತಿನಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ. ವಾವ್ರಿಂಕ ಹಂಗೇರಿಯದ ಮಾರ್ಟನ್ ಫುಸೊವಿಕ್ಸ್‌ರನ್ನು 1-6, 7-6(2), 7-6(10) ಸೆಟ್‌ಗಳಿಂದ ಸೋಲಿಸಿದ್ದಾರೆ.

ಕಳೆದ ವಾರ ವಾಶಿಂಗ್ಟನ್‌ನಲ್ಲಿ ನಡೆದ ಸಿಟಿ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅಮೆರಿಕದ ಬ್ರಾಡ್ಲಿ ಕ್ಲಾನ್‌ರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ನಾಲ್ಕನೇ ಶ್ರೇಯಾಂಕದ ದಕ್ಷಿಣ ಆಫ್ರಿಕ ಕೆವಿನ್ ಆ್ಯಂಡರ್ಸನ್ ರಶ್ಯದ ಎವ್‌ಜಿನಿ ಡಾನ್‌ಸ್ಕೊಯ್‌ರನ್ನು 4-6, 6-2, 7-6 ಸೆಟ್‌ಗಳಿಂದ ಸೋಲಿಸಿದ್ದಾರೆ.

ಅಮೆರಿಕದ 8ನೇ ಶ್ರೇಯಾಂಕದ ಆಟಗಾರ ಜಾನ್ ಇಸ್ನೆರ್ ಫ್ರಾನ್ಸ್‌ನ ಪೈರ್-ಹ್ಯೂಸ್ ಹೆರ್ಬರ್ಟ್‌ರನ್ನು 7-6(3), 6-2 ಅಂತರದಿಂದ ಮಣಿಸಿದ್ದಾರೆ.

ಇಟಲಿಯ ಫ್ಯಾಬಿಯೊ ಫೋಗ್ನಿನಿ ಕೆನಡಾದ ಡೆನಿಸ್ ಶಪೊವಾಲೊವ್ ವಿರುದ್ಧ 3-6, 5-7(14) ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News