ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ಮಟ್ಟ ಹಾಕಲು ಕ್ರಮ: ಡಾ.ಜಿ.ಪರಮೇಶ್ವರ್

Update: 2018-08-10 11:17 GMT

ಮಂಗಳೂರು, ಆ.10: ರಾಜ್ಯದಲ್ಲಿ ಮಾದಕ ವ್ಯಸನವನ್ನು ನಿಯಂತ್ರಿಸಲು ಇದರ ಹಿಂದಿರುವ ಮಾರಾಟದ ಜಾಲವನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

ಭಟ್ಕಳದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುವ ಉದ್ದೇಶದಿಂದ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿ ಕರ್ನಾಟಕದಲ್ಲಿ ನೆಲೆಸಿರುವವರ ಪೈಕಿ ಹಲವರ ಬಳಿ ವೀಸಾ ಇಲ್ಲದಿರುವುದು, ಕೆಲವರ ವೀಸಾ ಅವಧಿ ಮುಗಿದರೂ ಇಲ್ಲೇ ಉಳಿದುಕೊಂಡಿರುವುದು ಪತ್ತೆಯಾಗಿದೆ. ಅಂಥವರನ್ನು ಗುರುತಿಸಿ ಅವರನ್ನು ಮರಳಿ ಆಫ್ರಿಕಾ ಖಂಡದ ಅವರ ದೇಶಗಳಿಗೆ ಕಳುಹಿಸಲು ರಾಯಭಾರಿ ಕಚೇರಿಯನ್ನು ಸಂಪರ್ಕಿಸಲಾಗುತ್ತಿದೆ. ಅದೇರೀತಿ ರಾಜ್ಯದಲ್ಲಿರುವ ಬಾಂಗ್ಲಾದೇಶದ ಕೆಲವು ವಲಸಿಗರ ಬಳಿ ಸೂಕ್ತ ದಾಖಲೆಗಳು ಇಲ್ಲದಿರುವುದು ಪತ್ತೆಯಾಗಿದೆ. ಅಂಥವರನ್ನು ಪತ್ತೆ ಹಚ್ಚಿ ಅವರನ್ನು ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ರೈತ ಕುಟುಂಬದ ರಕ್ಷಣೆಗೆ ಸಾಲಮನ್ನಾ ಯೋಜನೆ
ರೈತರ ಆತ್ಮ ಹತ್ಯೆ ತಡೆಯುವುದು ಮತ್ತು ರೈತ ಕುಟುಂಬಗಳ ರಕ್ಷಣೆ ರಾಜ್ಯ ಸರಕಾರ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾಲಮನ್ನಾ ಮಾಡಲು ಸರಕಾರ ಹೆಚ್ಚು ಗಮನಹರಿಸಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ದೇಶದಲ್ಲಿ ಹಲವು ರಾಜ್ಯಗಳಲ್ಲಿ ರೈತರ ಸಾಮೂಹಿಕ ಆತ್ಮ ಹತ್ಯೆಗಳು ನಡೆಯುತ್ತಿವೆ.ಆದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲಮನ್ನಾ ಮಾಡಲು ಆಸಕ್ತಿ ವಹಿಸಿಲ್ಲ. ಸಾಲಮನ್ನಾಕ್ಕೆ ಕೇಂದ್ರ ಸರಕಾರದ ನೆರವು ದೊರೆಯದಿರುವುದರಿಂದ ರಾಜ್ಯ ಸರಕಾರದ ಮೇಲೆ ದೊಡ್ಡ ಮೊತ್ತದ ಆರ್ಥಿಕ ಹೊರೆ ಬಿದ್ದಿದೆ ಎಂದು ಅವರು ಹೇಳಿದರು.

*ಶಿರೂರು ಶ್ರೀ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಅವರ ಅಂತ್ಯವಿಧಿಗೆ ಮತ್ತು ಮಠದ ಪೂಜಾ ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸಲಾಗುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

* ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಪರಿಶಿಷ್ಟ ಜಾತಿ-ಪಂಗಡಗಳಿಗೆ ನಿಗದಿಪಡಿಸಿದ ಅನುದಾನ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಹಾಲಿ ಸಮ್ಮಿ ಶ್ರ ಸರಕಾರದ ಕಾಲದಲ್ಲೂ ಮುಂದುವರಿಯಲಿದೆ ಎಂದವರು ನುಡಿದರು.

ಜವಾಬ್ದಾರಿಯುತ ನಾಯಕನಾಗಿ ಸಿದ್ದರಾಮಯ್ಯ ಸರಕಾರದ ಮುಖ್ಯ ಮಂತ್ರಿಗೆ ಪತ್ರ ಬರೆದಿರುವುದು ತಪ್ಪಲ್ಲ. ಅದನ್ನು ದೊಡ್ಡ ವಿವಾದ ಮಾಡಬೇಕಾಗಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.

*ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ: 

ಉತ್ತರ ಕರ್ನಾಟಕಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ತಾರತಮ್ಯ ಮಾಡಿಲ್ಲ. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಜಿಲ್ಲೆ, ತಾಲೂಕುಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.

*ಪೊಲೀಸರ ವೇತನ ಪರಿಷ್ಕರಣೆಗೆ 6ನೆ ವೇತನ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. 12 ಸಾವಿರ ಬ್ಯಾಕ್ ಲಾಕ್ ಹುದ್ದೆಗಳನ್ನು ಈ ಹಿಂದೆಯೇ ಭರ್ತಿ ಮಾಡಲಾಗಿದೆ. ಔರಾದ್ಕರ್ ಸಮಿತಿಯ ಪ್ರಕಾರ ಪೊಲೀಸರ ವೇತನ ಪರಿಷ್ಕರಣೆ ಭತ್ತೆ ನೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ ಪರಮೇಶ್ವರ ಹೇಳಿದರು.

* ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಪತ್ತೆ ಕಾರ್ಯ ಫೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರದಲ್ಲಿ ಈ ಬಗ್ಗೆ ಎಲ್ಲ ವಿವರ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

*ಕಾಂಗ್ರೆಸ್ ಸೋಲಿಗೆ ಕಾರಣವನ್ನು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತದೆ. ಈ ಬಗ್ಗೆ ಇತರ ಪಕ್ಷದ ಮುಖಂಡರ ಹೇಳಿಕೆಗಳು ನಮ್ಮ ಅಭಿಪ್ರಾಯಗಳಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಮಂಗಳೂರಿನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಶಾಸಕರಾದ ಹರೀಶ್ ಕುಮಾರ್, ಮನಪಾ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವ, ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News