ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ದಿಲ್ಲಿಯವರೆಗೆ ಧ್ವನಿ ಮೊಳಗಲಿ: ಪ್ರದೀಪಕುಮಾರ್ ಕಲ್ಕೂರ

Update: 2018-08-10 11:29 GMT

ಮಂಗಳೂರು, ಆ.10: ಕಾಸರಗೋಡು ಕರ್ನಾಟಕದ ಅವಿಭಾಜ್ಯ ಪ್ರದೇಶ. ಅಲ್ಲಿನ ಆಡಳಿತ, ಶಿಕ್ಷಣ ಕನ್ನಡದಲ್ಲಿ ಇರಬೇಕು. ಆದರೆ ಮಲಯಾಳಿ ಹೇರಿಕೆಯಿಂದಾಗಿ ಕನ್ನಡಕ್ಕೆ ಆ ಜಿಲ್ಲೆಯಲ್ಲಿ ಸಮಸ್ಯೆಯಾಗುತ್ತಿದೆ. ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ದಿಲ್ಲಿಯವರೆಗೆ ಧ್ವನಿ ಮೊಳಗಬೇಕು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ್ ಕಲ್ಕೂರ ಹೇಳಿದರು.

ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯ ಮಲಯಾಲಂ ಕಳುಹಿಸುವ ಆದೇಶವನ್ನು ರದ್ದುಗೊಳಿಸುವಂತೆ ಕೇರಳ ಸರಕಾರದ ಮೇಲೆ ಕರ್ನಾಟಕ ಸರಕಾರ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಕಾಸರಗೋಡು ಕನ್ನಡ ಹೋರಾಟ ಸಮಿತಿಯು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

 ಕರ್ನಾಟಕ ಸರಕಾರವು ಸಿಇಟಿ ಮುಂತಾದ ಉನ್ನತ ಶಿಕ್ಷಣದ ಪ್ರವೇಶಾತಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಗಡಿನಾಡು ಕನ್ನಡಿಗರಿಗೆ ಮೀಸಲಾತಿ ನೀಡಿದೆಯಾದರೂ, ಈ ಮೀಸಲಾತಿಯ ದುರ್ಬಳಕೆಯಾಗುತ್ತಿದೆ. ಕನ್ನಡಿಗರಲ್ಲದವರು ಅಕ್ರಮ ಮಾರ್ಗದ ಮೂಲಕ ಪ್ರಮಾಣಪತ್ರ ಹಾಜರುಪಡಿಸಿ ಪ್ರವೇಶಾತಿ ಗಿಟ್ಟಿಸಿಕೊಳ್ಳುತ್ತಿರುವುದರಿಂದ ಅರ್ಹರು ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಅಥವಾ ಕನ್ನಡವನ್ನು ಒಂದು ಭಾಷೆಯಾಗಿ ತಮ್ಮ ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಮೀಸಲಾತಿ ಜಾರಿಗೆ ಬರುವಂತೆ ಕ್ರಮ ವಹಿಸಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿಯು ಸೂಕ್ತ ಪ್ರಮಾಣಪತ್ರಗಳನ್ನು ಹೊಂದಿದ ಕಾಸರಗೋಡಿನ ಕನ್ನಡಿಗ ಹಿರಿಯ ನಾಗರಿಕರಿಗೆ ಕೂಡಾ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು. ಮಂಗಳೂರು ರೈಲು ನಿಲ್ದಾಣದಲ್ಲಿ ಕನ್ನಡ ಮಾಹಿತಿ, ಸೂಚನೆ ಹಾಗೂ ಮಂಗಳೂರಿನಿಂದ ಕಾಞಂಗಾಡಿನವರೆಗಿನ ರೈಲು ನಿಲ್ದಾಣಗಳಲ್ಲಿ ಮಲೆಯಾಳದೊಂದಿಗೆ ಕನ್ನಡ ಭಾಷೆಯನ್ನೂ ಬಳಸಲು ಸೂಕ್ತ ಆದೇಶ ನೀಡಬೇಕು ಎಂಬುದಾಗಿ ರೈಲ್ವೇ ಅಧಿಕಾರಿಗಳಿಗೆ ಸೂಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಪ್ರ.ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಖಂಡ ಎಸ್.ವಿ.ಭಟ್, ಕಾಸರಗೋಡು ಜಿಪಂ ಸದಸ್ಯ ಹರ್ಷಾದ್ ವರ್ಕಾಡಿ, ಕಾಸರಗೋಡು ಕನ್ನಡ ಅಧ್ಯಾಪಕರ ಸಂಘದ ವಕ್ತಾರ ಮಹಾಲಿಂಗೇಶ್ವರ ಭಟ್, ಕಾಸರಗೋಡು ಕನ್ನಡ ಜಾಗೃತ ಸಮಿತಿ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನಿಲ್‌ದಾಸ್, ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ರವೀಂದ್ರ ಶೆಟ್ಟಿ, ಶಿವರಾಮ ಕಾಸರಗೋಡು ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News