ಎಡಪದವು: ಐಡಿಯಲ್ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಉದ್ಘಾಟನೆ

Update: 2018-08-10 09:48 GMT

ಎಡಪದವು, ಆ.10: ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಚುನಾಯಿತ ಶಾಲಾ ಮಂತ್ರಿಮಂಡಲ, ವಿಜ್ಞಾನ ಸಂಘ ಮತ್ತು ಪರಿಸರ ಸಂಘಗಳ ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಯೋಗಿಶ್ ಭಟ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳು ನಾಯಕತ್ವ, ಸಹಕಾರ, ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು.

ಸಂಸತ್ತಿನ ಕಾರ್ಯ ಕಲಾಪಗಳು, ಕಲಾಪಗಳ ಬಗ್ಗೆ ಚರ್ಚೆ, ಆಡಳಿತ ಹಾಗೂ ವಿರೋಧ ಪಕ್ಷದವರ ಜವಾಬ್ದಾರಿಯುತ ನಿರ್ವಹಣೆ, ಅವಿಶ್ವಾಸ ನಿರ್ಣಯವನ್ನು ಸದನದಲ್ಲಿ ಮಂಡಿಸುವ ಕ್ರಮ ಹಾಗೂ ಕಲಾಪವನ್ನು ಸುಗಮವಾಗಿ ನಡೆಯಲು ಸಭಾಪತಿಗಳ ಕಾರ್ಯತತ್ಪರತೆ ಇತ್ಯಾದಿ ವಿಚಾರಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಶಾಲಾ ಸಂಸತ್ತಿನ ಅಣಕು ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಂದ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆರ್.ಕೆ. ಪೃಥ್ವಿರಾಜ್ ಮಾತನಾಡಿ, ಶಾಲಾ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಿ, ರಾಷ್ಟ್ರ, ರಾಜ್ಯ ಹಾಗೂ ಜೆಲ್ಲೆಯಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಸಂಸತ್ತಿನಲ್ಲಿ ಚರ್ಚೆಮಾಡಿ, ಸಮಸ್ಯೆಗಳನ್ನು ತಿಳಿದು ಪೂರಕ ಕ್ರಮಗಳನ್ನು ಕೈಗೊಂಡು ದೇಶದ ಉತ್ತಮ ನಾಗರಿಕನಾಗಲು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಮಾಧವ ಶೆಣೈ ಮಾತನಾಡಿ ಶುಭ ಹಾರೈಸಿದರು.

ಶಾಲಾ ಸಂಚಾಲಕ ವೈ.ಮಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಶಾಲಾ ನಾಯಕನಾಗಿ ಮುಹಮ್ಮದ್ ನಿಹಾಲ್, ಉಪ ನಾಯಕನಾಗಿ ಮುಹಮ್ಮದ್ ಸುಹೈಲ್, ಸಭಾ ನಾಯಕಿಯಾಗಿ ಉನ್ನತಿ, ವಿರೋಧ ಪಕ್ಷದ ನಾಯಕಿ ಝರೀಫಾ ಹಾಗೂ ಉಳಿದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ನಂದಾ ಗಡಿಯಾರ್, ವಿದ್ಯಾರ್ಥಿ ಕೌನ್ಸಿಲ್ ನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವಿಜ್ಞಾನ ಸಂಘದ ಸಂಯೋಜಕ ಶಿಕ್ಷಕ ಸೈಮನ್ ಕಾರ್ಡೋಜಾ ಸಂಘದ ಉದ್ದೇಶ ವಾರ್ಷಿಕ ಚಟುವಟಿಕೆಗಳ ವಿವರ ನೀಡಿದರು. ಪರಿಸರ ಸಂಘದ ಸಂಯೋಜಕಿ ಶಿಕ್ಷಕಿ ನೌಶೀದಾ ಸಂಘದ ಅಗತ್ಯತೆ, ವಾರ್ಷಿಕ ಕ್ರೀಯಾಯೋಜನೆಗಳ ಸ್ಥೂಲ ಪರಿಚಯ ನೀಡಿದರು.

ಸಹ ಮುಖ್ಯೋಪಾಧ್ಯಾಯ ಫೆಲಿಕ್ಸ್ ಸಿಕ್ವೇರ, ಶಾಲಾ ಮ್ಯಾನೇಜರ್ ಫ್ಲೋಸಿ ತಾವ್ರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು. ಶಿಕ್ಷಕ ಸೈಮನ್ ಕಾರ್ಡೋಜಾ ಕಾರ್ಯಕ್ರಮ ನಿರ್ವಹಿಸಿದರು. ಸಹ ಮುಖ್ಯೋಪಾಧ್ಯಾಯ ಫೆಲಿಕ್ಸ್ ಸಿಕ್ವೇರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News