×
Ad

ಎನ್ ಡಿಎ ಅಧಿಕಾರವಧಿಯಲ್ಲಿ ಸರಕಾರಿ ಉದ್ಯೋಗಗಳಲ್ಲಿ ಕುಗ್ಗುತ್ತಿದೆ ಅಲ್ಪಸಂಖ್ಯಾತರ ಸಂಖ್ಯೆ

Update: 2018-08-10 20:51 IST

ಹೊಸದಿಲ್ಲಿ,ಆ.10: ಎನ್‌ಡಿಎ ಸರಕಾರವು ಮೇ,2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸರಕಾರಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮ(ಪಿಎಸ್‌ಯು)ಗಳ ಉದ್ಯೋಗಗಳಿಗೆ ಅಲ್ಪಸಂಖ್ಯಾತರ ನೇಮಕಾತಿ ಇಳಿಮುಖಗೊಂಡಿದೆ. ಸರಕಾರಿ ಸೇವೆ ಮತ್ತು ಪಿಎಸ್‌ಯುಗಳಲ್ಲಿ ಅಲ್ಪಸಂಖ್ಯಾತರ ನೇಮಕಾತಿ ಪ್ರಮಾಣವು 2014-15ರಲ್ಲಿ ಸುಮಾರು ಶೇ.8.56ರಷ್ಟಿದ್ದುದು,2015-16ರಲ್ಲಿ ಶೇ.7.5ಕ್ಕಿಳಿದಿದೆ ಎಂದು ಸರಕಾರವು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದೆ.

ನೂತನ ನೇಮಕಾತಿಗಳಲ್ಲಿ ಮುಸ್ಲಿಮರು ಸೇರಿದಂತೆ ಆರು ಮಾನ್ಯತೆ ಹೊಂದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಕ್ಕಿರುವ ಪಾಲಿನ ಶೇಕಡಾವಾರು ವಿವರಗಳನ್ನು ನೀಡುವಲ್ಲಿ ಅದು ವಿಫಲಗೊಂಡಿದೆ.

ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಅಲ್ಪಸಂಖ್ಯಾತರ ನೇಮಕಾತಿ ಕುರಿತಂತೆ ಈ ಸಂಚಿತ ದತ್ತಾಂಶವನ್ನು ಒದಗಿಸಿದರು.

ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಮತ್ತು ಪಿಎಸ್‌ಯು ಹುದ್ದೆಗಳಲ್ಲಿ ನೇಮಕಗೊಂಡಿರುವ ಮುಸ್ಲಿಮರು,ಕ್ರೈಸ್ತರು,ಸಿಕ್ಖರು ಮತ್ತು ಜೈನರ ಶೇಕಡಾವಾರು ವಿವರ ಮತ್ತು ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರಕಾರವು ತೆಗೆದುಕೊಂಡಿರುವ ಕ್ರಮಗಳನನ್ನು ತಿಳಿಯಲು ಮುರ್ಷಿದಾಬಾದ್(ಪ.ಬಂ)ನ ಸಿಪಿಎಂ ಸಂಸದ ಬದರುದ್ದೋಝಾ ಖಾನ್ ಅವರು ಬಯಸಿದ್ದರು.

2014-15 ಮತ್ತು 2015-16ನೇ ಸಾಲುಗಳಲ್ಲಿ ನೇಮಕಾತಿಗಳ ಸಂಚಿತ ಅಂಕಿಅಂಶಗಳನ್ನು ಮಾತ್ರ ಒದಗಿಸಿದ ನಕ್ವಿ,ಸರಕಾರದ ಬಳಿ 2016-17ನೇ ಸಾಲಿನ ಅಂಕಿಅಂಶಗಳಿಲ್ಲ ಎಂದು ತಿಳಿಸಿದರು.

ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರಕಾರದ ಕ್ರಮಗಳ ಕುರಿತ ಪ್ರಶ್ನೆಯಿಂದ ನುಣುಚಿಕೊಂಡ ನಕ್ವಿ,ತನ್ನ ಸಚಿವಾಲಯವು ಜಾರಿಗೊಳಿಸಿರುವ ತರಬೇತಿ ಯೋಜನೆಗಳನ್ನು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇನ್ನಷ್ಟು ಸದೃಢಗೊಳಿಸಲಾಗಿದೆ. ಅಲ್ಲದೆ ಕೌಶಲ್ಯಾಭಿವೃದ್ಧಿ ತರಬೇತಿ ಯೋೀಜನೆಗಳಡಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸರಕಾರಿ ಉದ್ಯೋಗಗಳನ್ನು ನಿರಾಕರಿಸಲಾಗಿರುವ ಎಷ್ಟು ಮುಸ್ಲಿಮರು ದೂರುಗಳನ್ನು ನಿಲ್ಲಿಸಿದ್ದಾರೆ ಎಂಬ ಖಾನ್ ಅವರ ಇನ್ನೊಂದು ಪ್ರಶ್ನೆೆಗೆ ನಕ್ವಿ,ಇಂತಹ ದೂರುಗಳ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲವೆಂದು ರಾಷ್ಟ್ರೀಯ ಅಲ್ಪಸಂಂಖ್ಯಾತರ ಆಯೋಗವು ತಿಳಿಸಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News